×
Ad

ಮಂಗಳೂರು: ಇಕ್ರಾ ಅರೆಬಿಕ್ ಸ್ಕೂಲ್ ವಾರ್ಷಿಕೋತ್ಸವ

Update: 2019-04-08 17:40 IST

ಮಂಗಳೂರು, ಎ. 8: ಇಕ್ರಾ ಅರೆಬಿಕ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭವು ನಗರದ ಪುರಭವನದಲ್ಲಿ ಶನಿವಾರ ಜರುಗಿತು. ಕುರ್‌ಆನ್ ಮತ್ತು ವಿಜ್ಞಾನದ ಬಗ್ಗೆ ಪ್ರದರ್ಶನ ಏರ್ಪಡಿಸಲಾಗಿತ್ತು. ನೂರಾರು ಮಂದಿ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಕೆಡುಕುಗಳನ್ನು ಹೋಗಲಾಡಿಸಲು ಕುರ್‌ಆನ್‌ನ್ನು ಅರಿತುಕೊಂಡು ಮಾರ್ಗದರ್ಶನ ನೀಡುವ ಅಗತ್ಯವಿದೆ. ಉಲಮಾಗಳು ನಿರಂತರವಾಗಿ ಇಂತಹ ಮಾರ್ಗದರ್ಶನಗಳನ್ನು ನೀಡಬೇಕು. ಪ್ರಸಕ್ತ ಸನ್ನಿವೇಶದಲ್ಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅರಿವು ಮೂಡಿಸುವ ಕೆಲಸವಾಗಬೇಕು. ಇಂತಹ ಕಾರ್ಯಗಳನ್ನು ಇಕ್ರಾ ಅರೆಬಿಕ್ ಸ್ಕೂಲ್ ಬಹಳ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯುನಿಟಿ ಆಸ್ಪತ್ರೆಯ ಚೆಯರ್ಮ್ಯಾನ್ ಡಾ. ಸಿ.ಪಿ.ಹಬೀಬ್ ರಹ್ಮಾನ್ ಮಾತನಾಡಿ, ಪವಿತ್ರ ಕುರ್‌ಆನ್‌ನ ತತ್ವ, ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ. ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಿದರೂ ಇಸ್ಲಾಮ್‌ನ ಸತ್ಯಗಳು ಗಟ್ಟಿತನವನ್ನು ಉಳಿಸಿಕೊಂಡಿವೆ. ಜ್ಞಾನದ ಜೊತೆಗೆ ಧರ್ಮವನ್ನು ಪಾಲನೆ ಮಾಡುವುದರಿಂದ ನಾವು ಉನ್ನತ ಸ್ಥಾನಕ್ಕೆ ಏರುತ್ತೇವೆ. ಇಕ್ರಾ ಅರೆಬಿಕ್ ಶಾಲಾ ಮಕ್ಕಳ ‘ವಿಜ್ಞಾನ ಮತ್ತು ಕುರ್‌ಆನ್’ ಪ್ರದರ್ಶನವು ಅತ್ಯುತ್ತಮವಾಗಿ ಮೂಡಿಬಂದಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವನೆ ಅಧಿಕ ಮಟ್ಟದಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಝ್ರತ್ ಮೌಲಾನ ಅಬುಲ್ ಹಸನ್ ಅಲಿ ನದ್ವಿ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಚೆಯರ್ಮ್ಯಾನ್ ಸೈಯದ್ ಮುಹಮ್ಮದ್ ಬ್ಯಾರಿ, ಇಕ್ರಾ ಅರೆಬಿಕ್ ಸ್ಕೂಲ್ ಕೇವಲ ಶಾಲೆಯಾಗಿರದೇ ಒಂದು ಮಿಶನ್ ಆಗಿದೆ. ಶಾಲೆಯು ಯಾವುದೇ ಒತ್ತಡಕ್ಕೆ ಒಳಗಾಗದೆ ಧನಾತ್ಮಕ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಪ್ರಸಕ್ತ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎನ್ನುವ ಸಾಮರ್ಥ್ಯವನ್ನು ಇಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.

ಯೆನೆಪೊಯ ವಿಶ್ವವಿದ್ಯಾನಿಲಯದ ಇಸ್ಲಾಮಿಕ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಜಾವೇದ್ ಜಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಕ್ರಾ ಅರೆಬಿಕ್ ಸ್ಕೂಲ್ ಪ್ರಾಂಶುಪಾಲರಾದ ಸಲೀಂ ಖಲೀಫಾ ನದ್ವಿ ಉಪಸ್ಥಿತರಿದ್ದರು.

ಬೆಳಗ್ಗಿನ ವೇಳೆ ಮಕ್ಕಳಿಗೆ ‘ವಿಜ್ಞಾನ ಮತ್ತು ಕುರ್‌ಆನ್’ ವಿಷಯದಲ್ಲಿ ಪ್ರದರ್ಶನ ನೀಡಲಾಯಿತು. ಮಧ್ಯಾಹ್ನದ ನಂತರ ದ.ಕ. ಜಿಲ್ಲಾಮಟ್ಟದ ಕಿರಾತ್ ಸ್ಪರ್ಧೆ ನಡೆಯಿತು. ಇದರಲ್ಲಿ ದ.ಕ. ಜಿಲ್ಲೆಯ ಹಲವು ವಿದ್ಯಾಸಂಸ್ಥೆಗಳು ಪಾಲ್ಗೊಂಡಿದ್ದವು. ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

‘ಆಲೀಮ್’ ಕಲಿಕೆ ಆರಂಭ

ಇಕ್ರಾ ಅರೆಬಿಕ್ ಸ್ಕೂಲ್ ನಲ್ಲಿ ಈ ವರ್ಷದ ರಮಝಾನ್ ಬಳಿಕ ಹಾಫಿಝ್ ಹಾಗೂ ಎಸೆಸೆಲ್ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪರಿಪೂರ್ಣವಾಗಿ ಅರೆಬಿಕ್ ಭಾಷೆಯಲ್ಲಿ ‘ಆಲೀಮ್’ ಕಲಿಸುವ ಕೋರ್ಸ್‌ನ್ನು ಆರಂಭಿಸಲಾಗುವುದು. ಆಸಕ್ತರು ಇಕ್ರಾ ಅರೆಬಿಕ್ ಶಾಲೆಯನ್ನು ಸಂಪರ್ಕಿಸಬಹುದು.

ಹಾಫಿಝ್ ಪದವಿ ಪ್ರದಾನ

ಸಭಾ ಕಾರ್ಯಕ್ರಮದ ಬಳಿಕ 12 ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಅಬ್ದುಲ್ ಮುಹೈಮಿನ್, ಮುಹಮ್ಮದ್ ರುಫೈದ್ ಪಲಕ್ಕಿ, ಅಹ್ಮದ್ ನಹಾನ್, ಅಬ್ದುಲ್ ರಹ್ಮಾನ್ ಹಸನ್, ಮುಹಮ್ಮದ್ ಆಸಿಫ್, ಮುಹಮ್ಮದ್ ಎಂ., ಅಫ್ಹಾನ್ ಹುಸೈನ್, ಅಹ್ಮದ್ ಸಿಯಾಮ್ ಮುಸ್ಬಾ, ಮುಹಮ್ಮದ್ ಫುಝೈಲ್ ಇಬ್ರಾಹೀಂ, ಶೇಕ್ ಮುಹಮ್ಮದ್ ಫಾಝಿಲ್, ಅಬ್ದುಲ್ ರಹಿಮಾನ್ ಮುಆದ್ ಟಿ.ಡಿ., ಆಯಿಷಾ ಮಿಶ್ಕತ್ ಅವರಿಗೆ ಬೆಂಗಳೂರು ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ 2017-18ನೇ ಸಾಲಿನ ಹಾಫಿಝ್ ಪದವಿ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News