×
Ad

ಸಂಪತ್ತಿನ ಅಸಮರ್ಪಕ ಹಂಚಿಕೆಯಿಂದ ಸಾಮಾಜಿಕ ಅಸಮತೋಲನ: ಅದಮಾರು ಕಿರಿಯ ಯತಿ

Update: 2019-04-08 18:28 IST

ಉಡುಪಿ, ಎ.8: ಆರ್ಥಿಕತೆಯ ಅಸಮರ್ಪಕ ವಿಭಜನೆಯಿಂದ ಇಂದು ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಪಾಲಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅಸಮತೋಲನ, ಆರ್ಥಿಕ ಏರುಪೇರು ಉಂಟಾಗುತ್ತಿದೆ ಎಂದು ಅದಮಾರು ಮಠ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹಾಗೂ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು ವಿವಿ ಅರ್ಥಶಾಸ್ತ್ರ ಸಂಘದ ವತಿಯಿಂದ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪಿಐಎಂ ಕಾಲೇಜಿನ ಪ್ರಜ್ಞಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಡಾ.ಎನ್.ಕೆ.ತಿಂಗಳಾಯ ಸ್ಮಾರಕ ‘ಗ್ರಾಮೀಣ ಬಡವರಿಗಾಗಿ ಬ್ಯಾಂಕಿಂಗ್’ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸ್ವಾರ್ಥ ಮನೋಭಾವನೆಯಿಂದ ಇಂದು ಸಂಪತ್ತನ್ನು ಒಂದೇ ಕಡೆ ಸಂಗ್ರಹಿ ಸುವ ಪರಿಪಾಠ ನಡೆಯುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಗಳಿಕೆಯನ್ನು ಸಮ ಪ್ರಮಾಣದಲ್ಲಿ ವಿಂಗಡಿಸುವ ಅವಶ್ಯಕತೆ ಇದೆ. ಪ್ರತಿಯೊಬ್ಬರು ತನ್ನ ಆದಾಯವನ್ನು ಶೇ.20ರಷ್ಟು ದಾನ, ಧರ್ಮ, ಶೇ.20ರಷ್ಟು ಗಳಿಕೆಯ ವೃದ್ಧಿ, ಶೇ.20 ಯಶಸ್ಸಿಗೆ, ಶೇ.20ರಷ್ಟು ತನ್ನ ಇಚ್ಛೆಗೆ, ಶೇ.20 ತನ್ನ ಏಳಿಗೆಗೆ ಸಹಾಯ ಮಾಡಿದವರಿಗೆ ಹಂಚಬೇಕು ಎಂದರು.

ಮೂಡಬಿದ್ರೆ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ವ್ಯವಹಾರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜಿ.ವಿ.ಜೋಷಿ ದಿಕ್ಸೂಚಿ ಭಾಷಣ ಮಾಡಿ, ಕರಾವಳಿಯನ್ನು ಸರಕಾರಗಳು ಕೂಡ ನಿರ್ಲಕ್ಷ್ಯ ಮಾಡುತ್ತಿವೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮ ಗಾರಿ ವಿಳಂಬವಾಗುತ್ತಿರುವುದು ಕರಾವಳಿ ಆರ್ಥಿಕತೆಗೆ ಪೂರಕವಾಗುತ್ತಿದೆ ಎಂದು ತಿಳಿಸಿದರು.

ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಭಾಸ್ಕರ್ ಹಂದೆ, ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕ ಮೋಹನ್ ರೆಡ್ಡಿ, ಕೆಎಸ್‌ಹೆಗ್ಡೆ ಮ್ಯಾನೇಜ್‌ಮೆಂಟ್ ಸಂಸ್ಥೆಯ ಡಾ.ಎನ್.ಎಸ್.ಶೆಟ್ಟಿ, ಮಂಗಳೂರು ವಿವಿ ಅರ್ಥಶಾಸ ಸಂಘದ ಅಧ್ಯಕ್ಷ ಡಾ. ಸುದರ್ಶನ್ ಕುಮಾರ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎ.ಪಿ.ಭಟ್ ವಹಿಸಿದ್ದರು. ಅರ್ಥಶಾಸ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ರಾವ್ ಎ. ಸ್ವಾಗತಿಸಿದರು. ಸೌಜನ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News