'ಆರೋಗ್ಯ ಇಲಾಖೆಯಿಂದ 'ಡಿಗ್ರೂಪ್' ಹೊರಗುತ್ತಿಗೆ ನೌಕರರ ಹುದ್ದೆ ಹಿಂದೆಗೆತ'
ಪುತ್ತೂರು: ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಗ್ರೂಪ್ ಹೊರಗುತ್ತಿಗೆ ನೌಕರರನ್ನು ಆರೋಗ್ಯ ಇಲಾಖೆಯು ಯಾವುದೇ ಪೂರ್ವ ಸೂಚನೆ ನೀಡದೆ ಹಿಂದೆಗೆತ ಮಾಡಿದ್ದು, ಈ ಅದೇಶವನ್ನು ತಕ್ಷಣವೇ ಹಿಂಪಡೆದುಕೊಳ್ಳಬೇಕು ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸೋಮವಾರ ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲಿ ಮಾತನಾಡಿದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ರಾಜೇಶ್ ಬನ್ನೂರು ಅವರು ಪುತ್ತೂರು ಸರಕಾರಿ ಆಸ್ಪತ್ರೆಗಳ ವ್ಯವಸ್ಥಿತ ಕಾರ್ಯನಿರ್ವಹಣೆಗೆ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಸ್ವಚ್ಛತೆ, ರಿಸೆಪ್ಶನ್, ದಾಖಲಾತಿ ಇತ್ಯಾದಿಗಳ ನಿರ್ವಹಣೆಗೆ ಡಿ ಗ್ರೂಪ್ ನೌಕರರ ಅಗತ್ಯವಿದೆ. ಇದೀಗ ಇಲಾಖೆಯು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಸರಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಹುದ್ದೆಯಿಂದ ತೆಗೆಯುವಂತೆ ಆದೇಶ ಹೊರಡಿಸಿದೆ. ಈ ಹಿಂದೆ ಸರಕಾರಿ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಗ್ರೂಪ್ ಡಿ ನೌಕರರ ನೇಮಕಾತಿ ಆಗದೇ ಇರುವ ಕುರಿತು ರಾಜ್ಯಾದ್ಯಂತ ದೂರುಗಳಿದ್ದವು. ಈ ಮಧ್ಯೆ ಇದೀಗ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನೂ ಹುದ್ದೆಯಿಂದ ತೆಗೆದು ಕಳುಹಿಸಬೇಕೆನ್ನುವ ಸರಕಾರದ ಆದೇಶ ಸರಿಯಲ್ಲ. ಆಸ್ಪತ್ರೆಗಳಲ್ಲಿ ಅತಿ ಅಗತ್ಯವಾಗಿ ಇರಬೇಕಾದ ನೌಕರರನ್ನು ಮುಕ್ತಗೊಳಿಸುವ ಈ ಆದೇಶ ಅತ್ಯಂತ ಅಪ್ರಬುದ್ಧ ಹಾಗೂ ವಿವೇಚನ ಶೂನ್ಯವಾಗಿದೆ. ಈ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡು ಮತ್ತೆ ಯಥಾಸ್ಥಿತಿ ಗ್ರೂಪ್ ಡಿ ನೌಕರರನ್ನು ನೇಮಕಗೊಳಿಸ ಬೇಕು ಎಂದರು.
ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಈಗಾಗಲೇ ಇರುವ ವ್ಯವಸ್ಥೆಯನ್ನು ರದ್ದುಗೊಳಿಸುವುದು ಆರೋಗ್ಯ ಇಲಾಖೆ ನಿರ್ವಹಿಸುವ ರಾಜ್ಯ ಸರಕಾರದ ಜನವಿರೋಧಿ ಧೋರಣೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಇಂತಹ ತುಘಲಕ್ ಯೋಜನೆಗಳು ಆರೋಗ್ಯ ವ್ಯವಸ್ಥೆಯನ್ನು ಹಳ್ಳ ಹಿಡಿಸಲಿವೆ. ಡಿಸೆಂಬರ್ ತಿಂಗಳಲ್ಲಿ ಈ ಆದೇಶವನ್ನು ಹೊರಡಿಸಿರುವ ಸರಕಾರ ಮಾ.22 ರಿಂದ ಜಾರಿಗೊಳಿಸುವಂತೆ ಆದೇಶಿಸಿದೆ. ಆದರೆ ಆದೇಶದ ಪ್ರತಿಯು ಶುಕ್ರವಾರ ತಲುಪಿದೆ. ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರು ಬೇಡವೆಂದಾದರೆ ಕೆಲಸವನ್ನು ಆದೇಶ ನೀಡಿರುವ ಮೇಲಾಧಿಕಾರಿಗಳು ಅವರ ಕೆಲಸ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಇದರ ವಿರುದ್ಧ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವ ಕುರಿತೂ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ವಿದ್ಯಾ ಗೌರಿ, ರಫೀಕ್ ದರ್ಬೆ ಉಪಸ್ಥಿತರಿದ್ದರು.