×
Ad

ಎನ್‍ಡಿಎ ಬಹುಮತ ಪಡೆದಲ್ಲಿ ಗ್ರಾಮ ಮಟ್ಟದಲ್ಲಿ ಬಜರಂಗದಳ ಪ್ರಾರಂಭ: ಸುನೀಲ್ ಕುಮಾರ್

Update: 2019-04-08 18:52 IST

ಪುತ್ತೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಕೂಡಾ ಮೋದಿಯ ಕುರಿತು ಮಾತನಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಎನ್‍ಡಿಎ ಬಹುಮತದೊಂದಿಗೆ ಜಯ ಸಾಧಿಸಿದರೆ ಬಜರಂಗದಳವನ್ನು ಗ್ರಾಮ ಗ್ರಾಮಗಳಲ್ಲಿ ಪ್ರಾರಂಭಿಸುತ್ತೇವೆ ಎಂದು ಎಂದು ಲೋಕಸಭಾ ಚುನಾವಣೆಯ ಪ್ರಭಾರಿ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.

ಅವರು ಸೋಮವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿ ಪಕ್ಷವು ಯಾವುದೇ ಜಾತಿಗೆ ಸೀಮಿತವಾಗಿ ಯೋಚನೆ ಮಾಡದೆ ಎಲ್ಲಾ ಜಾತಿಯವರನ್ನು ಗೌರವಿಸುತ್ತದೆ ಹಾಗೂ ಪ್ರೀತಿಸುತ್ತದೆ. ರಾಷ್ಟ್ರದ ಏಳಿಗೆ, ಹಿಂದುತ್ವ ಹಾಗೂ ಅಭಿವೃದ್ಧಿಗಾಗಿ ನಾಡಿನ ಜನತೆ ಮೋದಿಯನ್ನು ಬಯಸಿದ್ದಾರೆ. ಕಾಂಗ್ರೆಸ್ ಮುಖಂಡರು ನಮ್ಮನ್ನು ಮೋದಿಯ ಹೆಸರು ಹೇಳಿ ಮತ ಕೇಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿಯನ್ನು ಪ್ರಧಾನಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

ಪಕ್ಷದ ಮೊದಲ ಹಂತದ ಮತ ಪ್ರಚಾರವು ಮುಗಿದಿದ್ದು, ಇದೀಗ 2ನೇ ಹಂತದ ಪ್ರಚಾರ ಕಾರ್ಯ ನಡೆಯುತ್ತಿದೆ. ಕರ್ನಾಟಕದಲ್ಲಿ ಮೈತ್ರಿ ಸರಕಾರವು 11 ತಿಂಗಳಿನಿಂದ ಆಳ-ಮೇಳ ಇಲ್ಲದ ಸರಕಾವನ್ನು ನಡೆಸುತ್ತಿದೆ. ಕರ್ನಾಟಕದ ಸ್ಥಿತಿಯು ದೆಹಲಿಯಲ್ಲಿ ಬೇಡ ಎಂಬ ನಿಟ್ಟಿನಲ್ಲಿ ಸುಭದ್ರ ಸರಕಾರ ನಿರ್ಮಾಣ ಕ್ಕಾಗಿ, ಪೂರ್ಣ ಬಹುಮತದೊಂದಿಗೆ ಜಯವನ್ನು ಗಳಿಸಬೇಕೆಂದಿದ್ದೇವೆ ಎಂದು ಹೇಳಿದರು. 

ನರೇಂದ್ರ ಮೋದಿ, ಅವರು ಎ. 13ರಂದು ಮಂಗಳೂರಿಗೆ ಆಗಮಿಸಲಿದ್ದು, ಮಧ್ಯಾಹ್ನ 3.30ಕ್ಕೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಈ ಸಭೆಗೆ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 15 ಸಾವಿರಕ್ಕೂ ಹೆಚ್ಚು ಮಂದಿ ಈ ಸಭೆ ಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಚುನಾವಣೆಯ ಸಹ ಪ್ರಭಾರಿ ಪ್ರತಾಪ ಸಿಂಹ, ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಲೋಕಸಭಾ ಚುನಾವಣೆಯ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News