ಮೀನುಗಾರರ ಸಮಸ್ಯೆಗೆ ಸ್ಪಂದಿಸಲು ಸದಾ ಸಿದ್ಧ: ಪ್ರಮೋದ್

Update: 2019-04-08 14:49 GMT

ಉಡುಪಿ, ಎ.8: ಮೀನುಗಾರಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಗರಿಷ್ಠ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ. ನನ್ನನ್ನು ಸಂಸತ್ತಿಗೆ ಆರಿಸಿ ಕಳುಹಿಸಿ ದರೆ ಕರಾವಳಿ ಮೀನುಗಾರರಿಗೆ ಹೊಸ ಯೋಜನೆಗಳನ್ನು ರೂಪಿಸಿ ಪ್ರಚಲಿತ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವುದರೊಂದಿಗೆ, ಕೇಂದ್ರ ಸರಕಾರ ದಿಂದ ಹೆಚ್ಚಿನ ಸಬ್ಸಿಡಿಯಲ್ಲಿ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಿಗುವಂತೆ ಪ್ರಯತ್ನಿಸುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.

ಕರಾವಳಿಯ ಬಂದರುಗಳ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ತಂದು ಬಂದರು ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಮೀನುಗಾರರು ಮೃತಪಟ್ಟಲ್ಲಿ ಕೇಂದ್ರ ಸರಕಾರ 2 ಲಕ್ಷ ನೀಡುತ್ತಿದ್ದು, ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ರಾಜ್ಯ ಸರಕಾರ ಈಗಾಗಲೇ ಕೃಷಿಕರಿಗೆ ಸಾಲ ಮನ್ನಾ ಮಾಡಿದಂತೆ ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡಲು ಪ್ರಯತ್ನಿಸುತ್ತೇನೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರಕಾರ ಡೀಸೆಲ್ ಮತ್ತು ಸೀಮೆ ಎಣ್ಣೆ ಸಬ್ಸಿಡಿಯನ್ನು 300 ಲೀ.ಗೆ ನೀಡುತ್ತಿದ್ದು ಅದನ್ನು 500 ಲೀ. ಏರಿಸಲು ಪ್ರಯತ್ನ ಮಾಡುತ್ತೇನೆ. ನನ್ನನ್ನು ಲೋಕಸಭೆಗೆ ಆರಿಸಿ ಕಳುಹಿಸಿದ್ದಲ್ಲಿ ಮೀನುಗಾರರ ಹಿತಕ್ಕಾಗಿ ದುಡಿದು, ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News