ಉಡುಪಿ ನಗರದ ಬಡಾವಣೆಗಳಲ್ಲಿ ಕಲ್ಮರ್ಗಿ ಸ್ಥಾಪನೆ: ಪ್ರಾಣಿಗಳಿಗೆ ನೀರಿಡುವ ಹಳೆ ಸಂಪ್ರದಾಯಕ್ಕೆ ಮರುಜೀವ
ಉಡುಪಿ, ಎ.8: ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಸಲುವಾಗಿ ಕಲ್‌ಮರ್ಗಿಗಳನ್ನು ನಗರದ ಬಡವಾಣೆಗಳಲ್ಲಿ ಇಡುವ ಮೂಲಕ ಬೇಸಿಗೆಯ ಬಿರುಬಿಸಿಲಿಗೆ ಬಳಲಿ ಬೆಂಡಾಗುವ ಪ್ರಾಣಿ ಪಕ್ಷಿಗಳ ದಾಹ ತೀರಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ.
ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ರಾಜು ಕಾಪು, ಡೇವಿಡ್ ‘ಕಲ್‌ಲ್ ಮರ್ಗಿ’(ಕಲ್‌ಲ್ ಮರಾಯಿ) ಯೋಜನೆ ರೂವಾರಿಗಳಾಗಿ ಶ್ರಮಿಸಿದ್ದು, ಅವರೊಂದಿಗೆ ಪ್ರಾಣಿ ಪಕ್ಷಿ ಪ್ರಿಯರು ಬೆಂಬಲವಾಗಿ ನಿಂತಿದ್ದಾರೆ. ಪ್ರಾಣಿ ಪಕ್ಷಿಗಳ ಇರುವಿಕೆಯ ನೆಲೆಗಳನ್ನು ಗುರು ತಿಸಿ ಈ ಯೋಜನೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಮಿತಿ ಸಂಕಲ್ಪಿಸಿದೆ.
ನಗರದ ಬಡಾವಣೆಗಳಲ್ಲಿ ಪಕ್ಷಿಗಳು, ಬೀದಿನಾಯಿಗಳು, ಬೆಕ್ಕುಗಳು, ಬೀಡಾಡಿ ಜಾನುವಾರಗಳ ಸಂಚಾರ, ನೆಲೆ ಇರುವ ಸ್ಥಳಗಳನ್ನು ಗುರುತಿಸಿ, ಆಯಕಟ್ಟಿನ ಸ್ಥಳದಲ್ಲಿ ಕಲ್‌ಮರ್ಗಿಗಳನ್ನು ಇರಿಸಲಾಗಿದೆ. ಪ್ರತಿದಿನ ಕಲ್‌ಲ್ ಮರ್ಗಿಯೊಳಗೆ ನೀರು ತುಂಬಲು ಬಡಾವಣೆಯ ಮನೆ ನಿವಾಸಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಪ್ರಾಣಿ ಪಕ್ಷಿಗಳು ಬಿಸಿಲ ಧಗೆಯಲ್ಲಿ ನೀರು ಸೇವಿಸಿ ದಾಹ ತೀರಿಸಿಕೊಳ್ಳುತ್ತಿವೆ.
ನಗರದ ತೆಂಕಪೇಟೆ ಭುವನೇಂದ್ರ ಮಂಟಪ ರಸ್ತೆಯಲ್ಲಿ, ಹರಿಶ್ಚಂದ್ರ ಮಾರ್ಗ, ರಾಜಾಂಗಣ ವಾಹನ ನಿಲುಗಡೆ ಸ್ಥಳ, ಚಿತ್ತರಂಜನ್ ಸರ್ಕಲ್ ಬಳಿ, ಅಜ್ಜರ ಕಾಡು ಭುಜಂಗ ಪಾರ್ಕಿನಲ್ಲಿ ಕಲ್‌ಲ್ಮರ್ಗಿಯನ್ನು ಇಡಲಾಗಿದೆ. ಬಾಲಕೃಷ್ಣ ಭಂಡಾರಿ, ಅಜ್ಜರಕಾಡು ಸರೋಜನಿ ದೇವೆಂದ್ರ ಕಾಮತ್ ಹಾಗೂ ಚಿತ್ಪಾಡಿ ವಿಕಾಸ ಇಂಜಿನಯರಿಂಗ್ ವರ್ಕ್ಸ್‌ನ ಮಾಲಕರು ಉಚಿತವಾಗಿ ಕಲ್‌ಲ್ ಮರ್ಗಿ ಗಳನ್ನು ಒದಗಿಸಿ ಸಮಿತಿಯ ಯೋಜನೆಗೆ ಸಹಕರಿಸಿದ್ದಾರೆ.