×
Ad

ಉತ್ತಮ ಆರೋಗ್ಯ ಪದ್ದತಿಯಿಂದ ಅನಾರೋಗ್ಯ ತಡೆ ಸಾಧ್ಯ: ಡಾ.ಭಟ್

Update: 2019-04-08 21:11 IST

ಉಡುಪಿ, ಎ.8: ಉತ್ತಮ ಆರೋಗ್ಯಯುತ ಸಮಾಜದ ನಿರ್ಮಾಣ ಕೇವಲ ಸರಕಾರದಿಂದ ಆಗುವಂತಹ ಕೆಲಸವಲ್ಲ. ಅದಕ್ಕಾಗಿ ಖಾಸಗಿ ಹಾಗೂ ಸಹಕಾರಿ ಸಂಸ್ಥೆಗಳು ಕೂಡ ಕೈಜೋಡಿಸಬೇಕು. ಉತ್ತಮ ಆರೋಗ್ಯ ಪದ್ದತಿಯ ಮೂಲಕ ಶೇ.90ರಷ್ಟು ಅಾರೋಗ್ಯವನ್ನು ತಡೆಗಟ್ಟಬಹುದು. ಯುವಜನತೆ ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಆಹಾರ ಪದ್ದತಿಯನ್ನು ಬೆಳೆಸಿ ಕೊಳ್ಳಬೇಕು ಎಂದು ಉಡುಪಿ ಕರಾವಳಿಯ ಐಎಂಎಯ ಅಧ್ಯಕ್ಷ ಡಾ.ಗುರು ಮೂರ್ತಿ ಭಟ್ ಹೇಳೀದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ಸೋಮವಾರ ಆಯೋಜಿಸಲಾದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಎನ್.ಎಚ್.ಕ್ಯೂ ಹೊಸದಿಲ್ಲಿ ಇದರ ಆಡಳಿತ ಕಮಿಟಿಯ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಹಣ ಸಂಪಾದಿ ಸುವ ಭರದಲ್ಲಿ ಜನರು ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಆರೋಗ್ಯವಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಆರೋಗ್ಯವೇ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದುದರಿಂದ ಯುವ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸ್ತ್ರೀರೋಗ ತಜ್ಞೆ ಡಾ.ರಾಜಲಕ್ಷ್ಮೀ ಮಾತ ನಾಡಿ, ಯಾವುದೇ ದೈಹಿಕ ಆರೋಗ್ಯ ತೊಂದರೆ ಇಲ್ಲದಿರುವುದು ಆರೋಗ್ಯ ವಲ್ಲ. ಬದಲಾಗಿ ಮಾನಸಿಕ, ದೈಹಿಕ ಹಾಗೂ ಸಾಮಾಜಿಕವಾಗಿ ಆರೋಗ್ಯ ವಾಗಿದ್ದರೆ ಮಾತ್ರ ಅದು ನಿಜವಾದ ಆರೋಗ್ಯ ಎನಿಸಿಕೊಳ್ಳುತ್ತದೆ. ನಮ್ಮ ದೇಹದ ಅನಾರೋಗ್ಯಕ್ಕೆ ನಾವೇ ಕಾರಣ. ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡ ಬಹುದು ಎಂದು ತಿಳಿಸಿದರು.

ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ರೆಡ್‌ಕ್ರಾಸ್ ಸಂಸ್ಥೆಯ ಆರೋಗ್ಯ ಸಂದೇಶವನ್ನು ನೀಡಿದರು. ಉಪಸಬಾಪತಿ ಡಾ.ಅಶೋಕ್ ಕುಮಾರ್ ವೈ.ಜಿ ಸ್ವಾಗತಿಸಿ ದರು. ಗೌರವ ಖಜಾಂಚಿ ಟಿ.ಚಂದ್ರಶೇಖರ ವಂದಿಸಿದರು. ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News