ಕೋಟ ಠಾಣೆಯಿಂದ ಪರಾರಿಯಾಗಿದ್ದ ಅಕ್ರಮ ಮರಳುಗಾರಿಕೆ ಆರೋಪಿ ಸೆರೆ

Update: 2019-04-08 16:17 GMT

ಕೋಟ, ಎ.8: ಕೋಟ ಪೊಲೀಸ್ ಠಾಣೆಯಿಂದ ಮಾ.20ರಂದು ತಪ್ಪಿಸಿ ಕೊಂಡು ಪರಾರಿಯಾಗಿದ್ದ ಅಕ್ರಮ ಮರಳುಗಾರಿಕೆ ಆರೋಪಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಪ್ರಸ್ತುತ ಹಂಗಾರಕಟ್ಟೆ ನಿವಾಸಿ ಮಂಜು(28) ಎಂಬಾತನನ್ನು ಕೋಟ ಪೊಲೀಸರು ಇಂದು ಬಂಧಿಸಿದ್ದಾರೆ.

ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಪೊಲೀಸರು, ಮರಳು ತುಂಬಿಸಲಾಗುತ್ತಿದ್ದ 407 ಟೆಂಪೋ ಚಾಲಕ ಮಂಜುನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಠಾಣೆಯಲ್ಲಿ ವಿಧಿಬದ್ದ ಕಸ್ಟಡಿಯಲ್ಲಿದ್ದ ಮಂಜು, ಎಸ್ಸೈ ರಫೀಕ್ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಭದ್ರತೆಗಾಗಿ ನೇಮಿಸಿದ್ದ ಹೆಡ್‌ಕಾನ್ ಸ್ಟೇಬಲ್ ರಾಮ ದೇವಾಡಿಗ ಎಂಬವರನ್ನು ತಳ್ಳಿ ತಪ್ಪಿಸಿಕೊಂಡು ಪರಾರಿಯಾಗಿದ್ದನು.

ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಹೆಡ್‌ಕಾನ್ಟೇಬಲ್ ರಾಮ ದೇವಾಡಿಗ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸ ಲಾಗಿತ್ತು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಇಂದು ಬೆಳಗ್ಗೆ ಶಿಮೊಗ್ಗ ಜಿಲ್ಲೆಯ ತಾಳಗುಪ್ಪ ಎಂಬಲ್ಲಿ ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಆರೋಪಿಯನ್ನು ಸಂಜೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News