ಏರೋಎಂಐಟಿಗೆ ಅಮೆರಿಕದಲ್ಲಿ ಐದನೇ ಸ್ಥಾನ

Update: 2019-04-08 16:29 GMT

ಮಣಿಪಾಲ, ಎ.8: ಅಮೆರಿಕದ ಟೆಕ್ಸಾಸ್‌ನ ಫೋರ್ಟ್‌ವರ್ತ್‌ನಲ್ಲಿ ನಡೆದ ಎಸ್‌ಎಇ ಏರೋಡಿಸೈನ್ ಈಸ್ಟ್ 2019 ಸ್ಪರ್ಧೆಯಲ್ಲಿ ಮಣಿಪಾಲ ಮಾಹೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಏರೋಎಂಐಟಿ ತಂಡ ಐದನೇ ಸ್ಥಾನವನ್ನು ಪಡೆದಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತೀಯ ತಂಡಗಳಲ್ಲಿ ಎಂಐಟಿ ತಂಡ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ. ಉಳಿದಂತೆ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡಿಜೆಎಸ್ ಕಾಲೇಜ್ ಆಫ್ ಇಂಜಿನಿಯರ್ ಹಾಗೂ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‌ ಮೆಂಟ್‌ನ ತಂಡಗಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಚೀನದ ನಿಂಗ್‌ಕ್ಸಿಯಾ ವಿವಿ ತಂಡ ಈ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದರೆ, ಜೋರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರನ್ನರ್ ಅಪ್ ಹಾಗೂ ರೋಕ್ಲೋ ಯುನಿವರ್ಸಿಟಿ ಆಫ್ ಟೆಕ್ನಾಲಜಿ ತೃತೀಯ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿದವು.

14 ಸದಸ್ಯರ ಎಂಐಟಿ ತಂಡದಲ್ಲಿ ಶಕ್ತಿ ಹಬೀಬ್, ಅರೋನ್ ಸಿಕ್ವೇರಾ, ಉಲ್ಲಾಸ್ ಭಟ್, ಕಿರಣ್ ಡಿಸೋಜ, ಅಶ್ವಿನ್ ವರ್ಕಿ, ಕೌಸ್ತುಭ ಭುಜ್‌ಬಲ್, ಅಮಿಯಾ ಶಹಾನೆ, ಈಶಾನ್ ವೈದ್ಯ, ಜಸ್‌ಪ್ರೀತ್ ಬಕ್ಷಿ, ಸೊವಿಟ್ ಅಗರ್ವಾಲ್, ಅದಿತಿ ಕಾಮತ್, ಪ್ರಣವ್ ಕಾರ್ತಿಕ್, ಅರ್ನಾವ್ ದೇವ್ ಹಾಗೂ ಹಾರ್ದಿಕ್ ಜೋಶಿ ಇದ್ದರು.

ನಾವು ಕೆಲವು ತಿಂಗಳ ಹಿಂದೆಯೇ ಸ್ಪರ್ಧೆಗಾಗಿ ತಯಾರಿ ಆರಂಭಿಸಿದ್ದೆವು. ಪ್ರಾರಂಭದಿಂದಲೇ ನಾವು ಹಲವು ಸವಾಲುಗಳನ್ನು ಎದುರಿಸಿದ್ದೆವು. ವಿಮಾನ ತಯಾರಿಗೆ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಸಂಗ್ರಹಿಸುವುದೇ ನಮಗೊಂದು ಸವಾಲಾಗಿತ್ತು. ಅಲ್ಲದೇ ನಮಗೆ ಬೇಕಾದ ವಿಮಾನ ತಯಾರಿಯ ಬಿಡಿಭಾಗಗಳು, ಇಲೆಕ್ಟ್ರಾನಿಕ್ಸ್ ಭಾಗಗಳು ಮತ್ತು ಹೆಚ್ಚಿನ ಮೂಲ ವಸ್ತುಗಳು ವಿದೇಶದಲ್ಲೇ ದೊರೆಯುವುದರಿಂದ ಅವುಗಳನ್ನು ತರಿಸುವುದೇ ದೊಡ್ಡ ಸಮಸ್ಯೆಯಾಗಿತ್ತು ಎಂದು ತಂಡದ ನಾಯಕ ಶಕ್ತಿ ಹಬೀಬ್ ನುಡಿದರು.

ಏರೋಎಂಐಟಿ ಸ್ಪರ್ಧೆಯ ಮೈಕ್ರೋಕ್ಲಾಸ್ ವಿಭಾಗದಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ ಕಳಚಿ ಇಡಬಹುದಾದ ವಿಮಾನದ ಮಾದರಿಯನ್ನು ನಾವು ತಯಾರಿಸ ಬೇಕಿತ್ತು. ಇದರಲ್ಲಿ ಅತೀ ಹೆಚ್ಚು ಉಪಕರಣಗಳನ್ನು ಅದು ಸಾಗಿಸಬೇಕಿತ್ತು. ಸ್ಪರ್ಧೆಯಲ್ಲಿ ಮೂರು ಸುತ್ತುಗಳಿದ್ದು, ನಮ್ಮ ತಂಡ ಉತ್ತಮ ಸಾಧನೆಯನ್ನು ತೋರಿತು ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News