'ಭಯೋತ್ಪಾದನೆ-ಕೋಮುವಾದವನ್ನು ಎದುರಿಸಲು ಕಮ್ಯೂನಿಷ್ಟ್ ನಿಂದ ಮಾತ್ರ ಸಾಧ್ಯ'

Update: 2019-04-08 16:33 GMT

ಮೂಡುಬಿದಿರೆ: ದೇಶದಲ್ಲಿ ತಲೆ ಎತ್ತಿ ನಿಂತಿರುವ ಭಯೋತ್ಪಾದನೆ ಮತ್ತು ಕೋಮುವಾದ ಪಕ್ಷವನ್ನು ಎದುರಿಸಲು ರಾಹುಲ್ ಗಾಂಧಿಯಿಂದ ಸಾಧ್ಯವಿಲ್ಲ ಅದು ಕಮ್ಯೂನಿಷ್ಟ್ ಪಕ್ಷದಿಂದ ಮಾತ್ರ ಸಾಧ್ಯ ಅದಕ್ಕಾಗಿ ಸಿಪಿಐ(ಎಂ) ಕಾರ್ಯಕರ್ತರು ಹಗಲಿರುಳು ದುಡಿಯಬೇಕು ಎಂದು ಸಿಪಿಐ(ಎಂ)ನ ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ ಹೇಳಿದರು.

ಅವರು ಸಮಾಜ ಮಂದಿರದಲ್ಲಿ ಸೋಮವಾರ ನಡೆದ ಸಿಪಿಐ(ಎಂ)ರಾಜಕೀಯ ಸಮಾವೇಶದಲ್ಲಿ ಮಾತನಾಡಿದರು. ಹಿಂದೂಗಳನ್ನು ವಿರೋಧಿಸುವುದಿಲ್ಲ. ಹಿಂದುತ್ವವನ್ನು ವಿರೋಧಿಸುತ್ತೇವೆ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ. ಸಂವಿಧಾನ ಉಳಿಯಬೇಕಾದರೆ ಬಿಜೆಪಿ ಸೋಲಲೇಬೇಕು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನೀವು ಮತ ಹಾಕುವುದು ನಳಿನ್‍ಗಲ್ಲ, ಮೋದಿಗೆ ಎಂದು ಬಿಜೆಪಿಗರು ಮತ ಕೇಳುತ್ತಿದ್ದಾರೆ. 27 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇಧಕ್ಕೆ ಸೇರಿಸಲು ಸಾಧ್ಯವಾಗಿಲ್ಲ. ಇನ್ನು ಮೋದಿ ಮಂಗಳೂರಿಗೆ ಬಂದು ಅಭಿವೃದ್ದಿ ಮಾಡಲು ಸಾದ್ಯವೆ ಎಂದು ಪ್ರಶ್ನಿಸಿದರು. 

ಸಿಪಿಐ(ಎಂ)ಮುಖಂಡ ವಸಂತ ಆಚಾರಿ ಮಾತನಾಡಿ `ದೇಶದಲ್ಲಿ ಈಗ ಕಟ್ಟಡ ಕಾರ್ಮಿಕರಿಗೆ 12 ಸವಲತ್ತುಗಳಿವೆ. ಬಂಡವಾಳಶಾಹಿಗಳ ಪರವಾಗಿರುವ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ಸವಲತ್ತುಗಳಿಗೆ ಕತ್ತರಿ ಬೀಳಲಿದೆ. ಜಿಲ್ಲೆಯಲ್ಲಿ 2.5 ಲಕ್ಷ ಬೀಡಿ ಕಾರ್ಮಿಕರಿಗೆ ವಾರದಲ್ಲಿ ಎರಡು ದಿನ ಮಾತ್ರ ಕೆಲಸವಿದೆ. ಮುಂದೆ ಈ ಕೆಲಸವು ಸಿಗದಂತಾಗಬಹುದು. ಕಾರ್ಮಿಕ ವಿರೋಧಿ ಬಿಜೆಪಿ ಅಧಿಕಾರಕ್ಕೆ ಬರಲೇಬಾರದು' ಎಂದರು.

ಸಿಪಿಐ ಪ್ರಮುಖರಾದ ಯಾದವ ಶೆಟ್ಟಿ, ರಮಣಿ, ರಾಧಾ, ಗಿರಿಜ, ಶಂಕರ್ ವಾಲ್ಪಾಡಿ, ಕೃಷ್ಣಪ್ಪ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News