×
Ad

ಮಂಗಳೂರು ವಿವಿಯಲ್ಲಿ 'ದರ್ಪಣ 2019' ಕಾರ್ಯಕ್ರಮ

Update: 2019-04-08 22:09 IST

ಕೊಣಾಜೆ: ಇಂದು ತಂತ್ರಜ್ಞಾನ ಮುಂದುವರಿದಿದ್ದು ತಮ್ಮ ಮಕ್ಕಳ ಬಗ್ಗೆಯೇ ಪೋಷಕರಿಗೆ ಗಮನ ನೀಡಲು ಸಾಧ್ಯವಾಗುತಿಲ್ಲ. ಇದರಿಂದ ಮಕ್ಕಳ ಬೆಳವಣಿಯಲ್ಲೂ ಪರಿಣಾಮ ಬೀರುತ್ತಿದೆ. ಎಷ್ಟೇ ಕಷ್ಟವಾದರೂ ಮಕ್ಕಳ ಕಲೆಗಾರಿಕೆಯನ್ನು ಗುರುತಿಸಿ ಅವರಿಗೆ ನಿರಂತರ ಪ್ರೋತ್ಸಾಹ ನೀಡುವ ಜವಾಬ್ದಾರಿ ಪೋಷಕದ್ದಾಗಿದೆ ಎಂದು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಪದ್ಮಶ್ರೀ ಡಾ. ಸಯ್ಯದ್ ಎಂ.ಎಚ್.ಕಿರ್ಮಾನಿ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕ್ರೀಡಾಕೂಟದಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ, ಅಂತರ್ ವಿಶ್ವವಿದ್ಯಾಲಯ ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಕ್ರೀಡಾ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದು ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡಾಕೂಟದ ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದು, ಕ್ರೀಡಾಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. 

ಅಂದು ವಿಶ್ವಕಪ್ ಕ್ರಿಕೆಟ್‍ನ ಪಂದ್ಯಾಟದಲ್ಲಿ ಭಾರತವು ಅಲ್ಪ ಮೊತ್ತಕ್ಕೆ ಹೆಚ್ಚಿನ ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ನಾನು ಮತ್ತು ಕಪಿಲ್‍ದೇವ್ ಅವರು ಜೊತೆಯಾಗಿ ಮೂವತ್ತು  ಓವರ್ ಆಡಿ ಗೆಲುವು ಸಾಧಿಸಿದ ಅವಿಸ್ಮರಣೀಯ ಕ್ಷಣವನ್ನು ಎಂದಿಗೂ ಮರೆಯಲಾರೆ. ಕಪಿಲ್ ದೇವ್ ಅವರಂತಹ ಸಾಧಕನಿಗೆ ನಾನು ಇಂದಿಗೂ ತಲೆಬಾಗುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಅವರು, ಇಂದು ಕ್ರೀಡೆಗೆ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ನಮ್ಮಲ್ಲಿ ಸಾಧಿಸುವ ಛಲ  ಹಾಗೂ ಪ್ರಯತ್ನ, ಪರಿಶ್ರಮವಿದ್ದರೆ ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು ವಹಿಸಿದ್ದರು. ಸಮಾರಂಭದಲ್ಲಿ ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ.ಖಾನ್, ದೈಹಿಕ ಶಿಕ್ಷ ಣ ವಿಭಾಗ ದ  ನಿರ್ದೇಶಕರಾದ ಡಾ.ಕಿಶೋರ್ ಕುಮಾರ್  ಸಿ.ಕೆ., ದೈಹಿಕ ಶಿಕ್ಷಣ ವಿಭಾಗದ ಡಾ.ಜೆರಾಲ್ಟ್ ಸಂತೋಷ್ , ಹಣಕಾಸು ಅಧಿಕಾರಿ ಪ್ರೊ.ರವೀಂದ್ರಾಚಾರಿ ಮೊದಲಾದವರು ಉಪಸ್ಥಿತರಿದ್ದರು.

ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಕ್ರೀಡಾ ಸಾಧಕರಿಗೆ ಮಂಗಳೂರು  ವಿವಿಯಿಂದ ನೀಡಲಾಗುವ ಕ್ರೀಡಾಪುರಸ್ಕಾರ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡವು ಅತ್ಯಧಿಕ ಅಂಕಗಳೊಂದಿಗೆ ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡರೆ, ಉಜಿರೆಯ ಎಸ್‍ಡಿಎಂ ಕಾಲೇಜು ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು. ಇದೇ ಸಂದರ್ಭದಲ್ಲಿ  ಅಂತರ್ ರಾಷ್ಟ್ರೀಯ ಮಟ್ಟದಲ್ಲಿ, ಅಂತರ್ ವಿಶ್ವವಿದ್ಯಾಲಯ ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ  ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News