ಗ್ರಾಮಸ್ಥರ ವಿರೋಧದ ನಡುವೆ ಪೊಲೀಸ್ ಬಲಪ್ರಯೋಗ: ಆರೋಪ
ಮಂಗಳೂರು, ಎ.8: ‘ನಗರದ ಹೊರವಲಯ ಜೋಕಟ್ಟೆಯಲ್ಲಿ ಪೊಲೀಸರ ಬಲ ಪ್ರಯೋಗದಿಂದ ಎಂಆರ್‌ಪಿಎಲ್ ಸಂಸ್ಥೆಯು ಲೋಕಸಭೆ ಚುನಾವಣೆ ಗದ್ದಲದ ಮಧ್ಯೆಯೇ ತನ್ನ ಕಾಮಗಾರಿಗಳನ್ನು ಮರು ಆರಂಭಿಸಲು ಮುಂದಾಗಿದೆ’ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
‘ಪಣಂಬೂರು ಎಸಿಪಿ ಸೋಮವಾರ ತನ್ನ ಕಚೇರಿಯಲ್ಲಿ ಎಂಆರ್‌ಪಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ನನ್ನನ್ನು ಕರೆದಿದ್ದರು. ಎಂಆರ್‌ಪಿಎಲ್‌ನಿಂದ ದೂರು ಬಂದಿದೆ. ಅವರ ವ್ಯಾಪ್ತಿಯ ಕಾಮಗಾರಿಗಳನ್ನು ನೀವು ತಡೆಯುತ್ತಿದ್ದೀರಿ. ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು. ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದಾರೆ. ಆದ ಕಾರಣ ಗಲಾಟೆ ನಡೆಸಬಾರದು. ಜತೆಗೆ ಕಾಮಗಾರಿಗಳಿಗೆ ತಡೆ ಒಡ್ಡಬಾರದು ಎಂದು ಸೂಚನೆ ನೀಡಿದ್ದಾರೆ’ ಎಂದು ಮುನೀರ್ ಕಾಟಿಪಳ್ಳ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
‘ಸರಕಾರದ ಆದೇಶ ಜಾರಿಯಾಗದೆ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ. ಬಲ ಪ್ರಯೋಗ ಮಾಡಿದರೆ ಸಹಿಸುವುದಿಲ್ಲ. ಈ ಹಿಂದೆ ಎರಡು ಬಾರಿ ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದೆ. ಆದರೆ ಈ ಬಾರಿ ಬಂಧಿಸಿದರೆ ಯಾವುದೇ ಕಾರಣಕ್ಕೂ ಜಾಮೀನು ಪಡೆಯುವುದಿಲ್ಲ. ಸಮಸ್ಯೆ ಇತ್ಯರ್ಥವಾಗುವವರೆಗೂ ಜೈಲಿನಲ್ಲಿರುವುದಾಗಿ ಉತ್ತರಿಸಿದೆ. ಇನ್ನು ಯಾವುದೇ ಕ್ಷಣ ಏನಾದರೂ ನಡೆಯಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
‘ಎಂಆರ್‌ಪಿಎಲ್‌ನಿಂದ ಈ ವಾರದಲ್ಲಿ ಮೂರು ಬಾರಿ ಕಾಮಗಾರಿ ಆರಂಭಿಸಲು ಯತ್ನಿಸಲಾಗಿದೆ. ಗ್ರಾಮಸ್ಥರು ಹೋರಾಟ ಮಾಡಿ ಅವರನ್ನು ವಾಪಸ್ ಕಳುಹಿಸಿದ್ದಾರೆ. ಡಿಸಿಪಿ, ಎಸಿಪಿಗಳ ಮೂಲಕ ಒತ್ತಡ ಹೇರಿ ಬಲಪ್ರಯೋಗಕ್ಕೆ ಮುಂದಾಗಿದ್ದಾರೆ. ಕರಾವಳಿಯಲ್ಲಿ ಇಂತಹ ಜ್ವಲಂತ ಸಮಸ್ಯೆಗಳು, ಬದುಕಿನ ಪ್ರಶ್ನೆಗಳು ಚುನಾವಣಾ ಚರ್ಚೆಯಾಗದಿರುವುದು ನಿಜವಾದ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರಿ ಆದೇಶ ಜಾರಿಯಾಗಿಲ್ಲ: ಜೋಕಟ್ಟೆ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಕಳೆದ ಐದು ವರ್ಷಗಳ ಹಿಂದೆ ಎಂಆರ್‌ಪಿಎಲ್ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಕೋಕ್ ಸಲ್ಫರ್, ಹಾರು ಬೂದಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ವಿರುದ್ಧ ಗ್ರಾಮಸ್ಥರ ಜತೆಗೂಡಿ ಹೋರಾಟ ಮಾಡಲಾಗಿತ್ತು. ಎರಡೂವರೆ ವರ್ಷಗಳ ಸತತ ಹೋರಾಟ ಮಾಡಲಾಗಿತ್ತು. ತಮ್ಮ ಬೇಡಿಕೆಗಳಿಗೆ ಸಹಮತ ವ್ಯಕ್ತಪಡಿಸಿದ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ವಿತರಣಾ ಘೋಷಣೆ ಬಗ್ಗೆ ಆದೇಶ ನೀಡಿತ್ತು. ಆದರೆ ಇಲ್ಲಿಯವರೆಗೂ ಸರಕಾರದ ಆದೇಶ ಜಾರಿಯಾಗಿಲ್ಲ’ ಎಂದು ಅಳಲು ತೋಡಿಕೊಂಡರು.
‘ಸರಕಾರದ ಆದೇಶದಲ್ಲಿ ಜೋಕಟ್ಟೆ ವ್ಯಾಪ್ತಿಯಲ್ಲಿ ಹಸಿರುವಲಯ ನಿರ್ಮಾಣ, ಶಬ್ದ ಮಾಲಿನ್ಯ ತಡೆಗಟ್ಟುವುದು, ಕೆಲ ಗ್ರಾಮಸ್ಥರ ಸ್ಥಳಾಂತರ ಮಾಡುವುದು ಸೇರಿದಂತೆ ಆರು ಅಂಶಗಳ ಪಟ್ಟಿಯನ್ನು ಆದೇಶದಲ್ಲಿ ವಿವರಿಸಲಾಗಿತ್ತು. ಇದಕ್ಕೆ ಸರಕಾರ ಸಮಯವನ್ನೂ ನಿಗದಿ ಮಾಡಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಅಂಶಗಳ ಅನುಷ್ಟಾನವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಗ್ರಾಮಸ್ಥರ ಬೆಂಬಲ: ‘ಎಸಿಪಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಜೋಕಟ್ಟೆಯಲ್ಲಿ ಗ್ರಾಮಸ್ಥರ ಸಭೆ ಕರೆದು ವಿಷಯ ತಿಳಿಸಿದೆ. ಅದಕ್ಕೆ ಗ್ರಾಮಸ್ಥರು ತನ್ನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನೀವು ಜೈಲಿಗೆ ಹೋದರೆ ನಾವು ಜೈಲಿಗೆ ಬರುತ್ತೇವೆ ಎಂದು ಊರಿನ ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ’ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.