ಕೇರಳ: ಸಮುದ್ರದಲ್ಲಿ ಮುಳುಗುತ್ತಿದ್ದಾತನನ್ನು ರಕ್ಷಿಸಿದ ನೌಕಾಪಡೆ ಅಧಿಕಾರಿ

Update: 2019-04-08 18:08 GMT

ತಿರುವನಂತಪುರಂ, ಎ.8: ಕೇರಳದ ಬೀಚ್‌ವೊಂದರಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ನೌಕಾಪಡೆ ಅಧಿಕಾರಿ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಭಾರತೀಯ ನೌಕಾಪಡೆಯ ಅಧಿಕಾರಿ ರಾಹುಲ್ ದಲಾಲ್ ಎ. 5ರಂದು ಕೇರಳದ ವೈಪಿನ್ ಬೀಚ್ ಬಳಿ ತನ್ನ ಪತ್ನಿಯೊಂದಿಗೆ ನಿಂತಿದ್ದರು. ಈ ವೇಳೆ ಈಜಲು ತಿಳಿಯದ ವ್ಯಕ್ತಿಯೊಬ್ಬ ಸಹಾಯಕ್ಕಾಗಿ ಗೋಗರೆಯುತ್ತಿರು ವುದನ್ನು ಕಂಡ ಅವರು ಕೂಡಲೇ  ನೀರಿಗೆ ಜಿಗಿದು  ಸುಮಾರು 20  ನಿಮಿಷಗಳ ಕಾಲ ಅಲೆಗಳ  ಜೊತೆ ಹೋರಾಡಿ ಆತನನ್ನು ರಕ್ಷಿಸಿದ್ದಾರೆ ಎಂದು ನೌಕಾಪಡೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ  ಪೋಸ್ಟ್‌ನಲ್ಲಿ ತಿಳಿಸಲಾಗಿದೆ. 

ಅಧಿಕಾರಿ ರಕ್ಷಿಸಿರುವ ವ್ಯಕ್ತಿಯನ್ನು ಮಹಾರಾಷ್ಟ್ರದ ಔರಂಗಾಬಾದ್‌ನ ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ. ನೀರಿನಿಂದ ಹೊರತರಲಾದ ವ್ಯಕ್ತಿ ಪ್ರಜ್ಞಾಹೀನನಾಗಿದ್ದು ಆತನಿಗೆ ಉಸಿರಾಟಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ದಲಾಲ್  ಆತನಿಗೆ  ಕೃತಕ  ಉಸಿರಾಟ ನೀಡಿ  ಪ್ರಾಣ ಉಳಿಸಿದ್ದಾರೆ.  ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿ ದಿಲೀಪ್ ಕುಮಾರ್‌ನನ್ನು  ಸಮೀಪದ ಸರಕಾರಿ  ಆಸ್ಪತ್ರೆಗೆ ಸಾಗಿಸಲಾಗಿದೆ  ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News