×
Ad

ಬಿಜೆಪಿ ಸೋಲಿಸಬಲ್ಲ ಜಾತ್ಯತೀತ ಪಕ್ಷಕ್ಕೆ ಬೆಂಬಲ: ಸಿಪಿಎಂ

Update: 2019-04-09 17:33 IST

ಮಂಗಳೂರು, ಎ.9: ಬಿಜೆಪಿ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಸಿಪಿಎಂ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸೇರಿದಂತೆ ಎಡಪಕ್ಷಗಳು ಸ್ಪರ್ಧಿ ಸದಿರುವ ಕ್ಷೇತ್ರಗಳಲ್ಲಿ ಜಾತ್ಯತೀತ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿ ಕೋಮುದ್ವೇಷವನ್ನು ಬೆಳೆಸಲು ಕಾರಣರಾದ ನಳಿನ್ ಕುಮಾರ್ ಕಟೀಲು ಅವರನ್ನು ಸೋಲಿಸಬಲ್ಲ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದರು.

2 ಅವಧಿಯಲ್ಲಿ ಸಂಸದರಾಗಿರುವ ಬಿಜೆಪಿಯ ನಳಿನ್ ಕುಮಾರ್ ಕಟೀಲು ದ.ಕ. ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಇವರ ಅವಧಿಯಲ್ಲಿ ಸಂಘ ಪರಿವಾರದವರು ನಡೆಸಿರುವ ಲವ್ ಜಿಹಾದ್, ಗೋಸಾಗಾಟ ತಡೆ, ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗಳಿಗೆ ಬೆಂಬಲ ನೀಡಿದ್ದಾರೆ. ಮೇಲುಸೇತುವೆ, ಟೋಲ್‌ಗೇಟ್‌ಗಳಿಂದ ಕೂಡಿದ ಕರಾವಳಿ ರಾಷ್ಟ್ರೀಯ ಹೆದ್ದಾರಿ ಎಂಟು ವರ್ಷಗಳಾದರೂ ಪೂರ್ಣವಾಗಿಲ್ಲ. ಜಿಲ್ಲೆಯ ವಿಜಯಾ ಬ್ಯಾಂಕ್‌ನ ವಿಲೀನಕರಣವನ್ನು ಸಂಸದ ನಳಿನ್ ಕುಮಾರ್ ತಡೆಯುವ ಪ್ರಯತ್ನವೇ ಮಾಡಿಲ್ಲ. ಮಂಗಳೂರು ವಿಮಾ ನಿಲ್ದಾಣ ನಿರ್ವಹಣೆ ಅದಾನಿಯವರ ಖಾಸಗಿ ಸಂಸ್ಥೆಗೆ ಹಸ್ತಾಂತರವಾಗಿದೆ. ನವಮಂಗಳೂರು ಬಂದರು, ಮಂಗಳೂರು ರೈಲ್ವೇ ನಿಲ್ದಾಣಗಳು ಖಾಸಗಿಯವರಿಗೆ ಹಸ್ತಾಂತರವಾದರೂ ಅಚ್ಚರಿ ಪಡಬೇಕಾಗಿಲ್ಲ. 10 ವರ್ಷಗಳ ಅವಧಿಯಲ್ಲಿ ಎದ್ದು ಕಾಣುವ ಕಾಮಗಾರಿ ಯಾವುದನ್ನೂ ನಳಿನ್ ಕುಮಾರ್ ಕಟೀಲು ಮಾಡಿಲ್ಲ ಎಂದು ಅವರು ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ವಸಂತ ಆಚಾರಿ, ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಮತಗಳು ವಿಭಜನೆಯಾಗಬಾರದು ಎಂಬ ಉದ್ದೇಶದಿಂದ ದ.ಕ. ಲೋಕಸಭಾ ಕೆ್ಷೀತ್ರದಲ್ಲಿ ಸ್ಪರ್ಧಿಸುತ್ತಿಲ್ಲ ಎಂದರು.

2014ರ ಚುನಾವಣೆಯ ಬಿಜೆಪಿ ಭರವಸೆಗಳು ಈಡೇರಿಲ್ಲ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯ ವಾಕ್ಯದ ಭರವಸೆಯನ್ನು 2014ರ ಚುನಾವಣೆಯ ಸಂದರ್ಭ ಬಿಜೆಪಿ ನೀಡಿತ್ತಾದರೂ ಆಗಿರುವುದು ಉದ್ಯಮಿಗಳ ವಿಕಾಸ ಮಾತ್ರ. ಹಿಂದಿನ ಯುಪಿಎ ಸರಕಾರದ ಅವಧಿಯ ಭ್ರಷ್ಟಾಚಾರವನ್ನು ಎತ್ತಿ ಹಿಡಿದು ತಾವು ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸುವುಾಗಿ ಆಶ್ವಾಸನೆ ನೀಡಿದರೂ ಅದು ಆಗಿಲ್ಲ. ಭಾರತದಿಂದ ವಿದೇಶಕ್ಕೆ ಹೋಗಿದೆ ಎನ್ನಲಾದ ಕಪ್ಪು ಹಣವನ್ನು ವಾಪಾಸು ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗ ರೂ. 15 ಲಕ್ಷ ರೂ. ಜಮಾ ಮಾಡುವ ಆಶ್ವಾಸನೆ, ಎರಡು ಲಕ್ಷ ಉದ್ಯೋಗ ಸೃಷ್ಟಿ, ತೈಲೋತ್ಪನ್ನಗಳ ಬೆಲೆ ಇಳಿಕೆ, ರೈತರ ಉತ್ಪನ್ನಗಳಿಗೆ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ, ಮಹಿಳೆಯರ ಸಂರಕ್ಷಣೆ, ಅಚ್ಚೇ ದಿನಗಳ ಭರವಸೆ ಎಲ್ಲವೂ ಹುಸಿಯಾಗಿದೆ. ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲ ಕಾಯಿದೆ ಜಾರಿಗೆ ತರಲು ಐದು ವರ್ಷದಿಂದಲೂ ಆಗಿಲ್ಲ. ಭರವಸೆಗೆ ವಿರುದ್ಧವಾಗಿ ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ನಡೆದಿದೆ. ಪ್ರಧಾನಿ ಮಂತ್ರಾಲಯವೇ ಅವ್ಯವಹಾರ ನಡೆಸಿದ್ದು, ಮೇಕ್ ಇನ್ ಇಂಡಿಯಾ ಘೋಷಣೆ ನೀಡಿದ ಪ್ರಧಾನಿ ನರೇಂದ್ರ ಮೋದಿ ದೇಶೀಯ ಪ್ರತಿಷ್ಠಿತ ಎಚ್‌ಎಎಲ್ ಸಂಸ್ಥೆಯನ್ನು ಕೈಬಿಟ್ಟು ಯುದ್ಧ ವಿಮಾನ ನಿಲ್ದಾಣದಲ್ಲಿ ಅನುಭವವೇ ಇಲ್ಲದ ಆಪ್ತ ಅಂಬಾನಿಗೆ ರಫೇಲ್ ಯುದ್ಧ ವಿಮಾನ ಜೋಡಣೆಯ ಉದ್ಯಮವನ್ನು ಉದಾರವಾಗಿ ನೀಡಿದ್ದಾರೆ. ಸ್ವದೇಶಿ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಆಡಳಿತ ಸಾರ್ವಜನಿಕ ರಂಗದ ಪಾಲನ್ನು ವಿದೇಶಿ ನೇರ ಹೂಡಿಕೆಗೆ ಬಿಟ್ಟು ಕೊಟ್ಟಿದೆ. ರಕ್ಷಣಾ ಸಂಬಂಧವಾದ ನೌಕಾನೆಲೆ, ವಾಯುನೆಲೆ, ಜಂಟಿ ಸೈನಿಕ ಕಸರತ್ತು ಎಲ್ಲದರಲ್ಲೂ ಅಮೆರಿಕ ಪಾಲುದಾರನಾಗಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್, ವೆನೆಜುವೇಲಾಗಳ ಅಗ್ಗದ ತೈಲ ಆಮದನ್ನು ನಿಲ್ಲಿಸಾಗಿದೆ ಎಂದು ಅವರು ಆರೋಪಿಸಿದರು.

ನೋಟು ಅಮಾನ್ಯೀಕರಣದಂತಹ ದುಸ್ಸಾಹದಿಂದ ದೇಶದ ಸಾಮಾನ್ಯ ಜನತೆ ಬಳಲಬೇಕಾಯಿತು. ಜಿಎಸ್‌ಟಿಯಂತಹ ತೆರಿಗೆ ಪದ್ಧತಿಯನ್ನು ರೂಪಿಸಿ, ತೆರಿಗೆಯನ್ನು ಸರಳೀಕರಣಗೊಳಿಸದೆ ಸಣ್ಣ ವ್ಯವಹಾರಸ್ಥರು ತೊಂದರೆ ಅನುಭವಿಸುವಂತಾಯಿತು. ರಾಜ್ಯಗಳಿಗೆ ಸಿಗಬೇಕಾಗಿದ್ದ ತೆರಿಗೆ ಸಂಪನ್ಮೂಲ ಕಡಿತಗೊಂಡಿತು. ಪ್ರಧಾನಿ ಮೋದಿಯವರ ಮಾತುಗಳನ್ನು ಪ್ರಶ್ನಿಸಿದವರನ್ನು ದೇಶ ದ್ರೋಹಿಗಳೆಂದೂ ಪಾಕ್ ಏಜೆಂಟರೆಂದೂ ಕರೆಯಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರವನ್ನು ದಮನಿಸಲಾಗುತ್ತಿದೆ. ತಮ್ಮ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ತಮ್ಮ ವಿಫಲತೆ ಮರೆಮಾಚಲು ದೇಶದ ಭದ್ರತೆ ಮತ್ತು ವಿದೇಶಿ ದಾಳಿಯ ಗುಮ್ಮನನ್ನು ಮುಂದಿಟ್ಟು ಬಿಜೆಪಿ ಚುನಾವಣಾ ಪ್ರಚಾರದಲ್ಲಿ ತೊಡಗಿದೆ ಎಂದು ವಸಂತ ಆಚಾರಿ ಆರೋಪಿಸಿದರು.

ಗೋಷ್ಠಿಯಲ್ಲಿ ಜೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಯು.ಬಿ. ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್, ವಾಸುದೇವ ಉಚ್ಚಿಲ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News