×
Ad

ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2019-04-09 17:59 IST

ಬಂಟ್ವಾಳ, ಎ. 9: ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಸಿಬ್ಬಂದಿಯ ದರ್ಪದ ನಡವಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಸಂದೇಶ ವೈರಲ್ ಆದ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಳ ಹಾಗೂ ಹೊರ ರೋಗಿಗಳೊಂದಿಗೆ ಮಾತುಕತೆ ನಡೆಸಿ, ಆಸ್ಪತ್ರೆಯ ಸೇವೆಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ರೋಗಿಗಳ ಅನುಕೂಲದ ದೃಷ್ಟಿಯಿಂದ ಆಸ್ಪತ್ರೆಯ ಪ್ರವೇಶ ಭಾಗದಲ್ಲಿ ವೈದ್ಯರ ದೂರವಾಣಿ ಸಂಪರ್ಕ ಸಂಖ್ಯೆ ಹಾಕುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಶಾಸಕರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರವಾಣಿ ಕರೆ ಮಾಡಿ ವಜಾಗೊಂಡಿರುವ 18 ಮಂದಿ ಹೊರಗುತ್ತಿಗೆ ಕಾರ್ಮಿಕರನ್ನು ಮತ್ತೆ ನಿಯುಕ್ತಿಗೊಳಿಸುವಂತೆ ಮನವಿ ಮಾಡಿಕೊಂಡರು. ಶೌಚಾಲಯ ಅಸ್ವಚ್ಛತೆಯ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛ ವಾಗಿಟ್ಟುಕೊಳ್ಳುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.

ಇತ್ತೀಚೆಗೆ ವಿಪರೀತ ವಾಂತಿ ಭೇದಿ, ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ದಾಖಲಾತಿ ಮಾಡಲು ವೈದ್ಯರೂ ಸೂಚಿಸಿದ್ದರೂ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್‍ವೊಬ್ಬರು ನಿರಾಕರಿಸಿದ ಪರಿಣಾಮ ಎರಡು ಗಂಟೆ ತಡವಾಗಿ ರೋಗಿಗೆ ಚಿಕಿತ್ಸೆ ನೀಡಿದ್ದರಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಈ ಬಗ್ಗೆ ಆಸ್ಪತ್ರೆಯ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ, ತಕ್ಷಣ ಶಾಸಕರು ಆಸ್ಪತ್ರೆಗ ಭೇಟಿ ನೀಡಿ ಎನ್ನುವ ಸಂದೇಶವೊಂದು ಸೋಮವಾರ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದು, ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದರಂತೆ ಶಾಸಕರು ಈ ಭೇಟಿ ಕೈಗೊಂಡಿದ್ದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾಪ್ರಭು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ, ಪ್ರಮುಖರಾದ ರಮಾನಾಥ ರಾಯಿ, ರಾಮದಾಸ ಬಂಟ್ವಾಳ ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News