ಜೀವನದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ: ಪ್ರಕಾಶ್ ಬಾರೆ

Update: 2019-04-09 12:31 GMT

ಕೊಣಾಜೆ: ನಾವು ಯಾವುದೇ ವೃತ್ತಿಯಲ್ಲಿದ್ದರೂ ಅದರ ಜೊತೆಗೆ ನಟನೆ ಅಥವಾ ಇತರ ಆಸಕ್ತಿಯ ಕ್ಷೇತ್ರಗಳಲ್ಲಿ  ತೊಡಗಿಸಿಕೊಂಡು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಮಲಯಾಳಂ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪ್ರಕಾಶ್ ಬಾರೆ ಹೇಳಿದ್ದಾರೆ.

ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಕೊಣಾಜೆಯ ಮಂಗಳೂರು ವಿ.ವಿ. ಆವರಣದ ಮಂಗಳಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಸಿನಿಮಾ ಉತ್ಸವ `ರಿಪ್ಲೆಕ್ಷನ್ 2019' ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಲಾ ಪ್ರಕಾರ , ಮನರಂಜನೆಯನ್ನು ಯಾರೋ ಬಂದು ನಮ್ಮ ಮೇಲೆ ಹೇರುವ ಹಾಗಿರಬಾರದು. ನಮ್ಮ ಸ್ವಾತಂತ್ರ್ಯದ, ಆಯ್ಕೆಯ ಸಿನಿಮಾ ಗಳನ್ನು ನೋಡುವ ಅವಕಾಶ ಇರಬೇಕು. ಸಿನಿಮಾ ಉತ್ಸವಗಳಲ್ಲಿ ಈ ಅವಕಾಶ ದೊರಕುತ್ತದೆ. ಅಂತರ್ಜಾಲ ತಾಣಗಳು ನಮಗೆ ಇಂತಹ ಮುಕ್ತ ಅವಕಾಶ ಒದಗಿಸಿಕೊಡುತ್ತಿವೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಕೆ. ಮಾತನಾಡಿ, ವಾಣಿಜ್ಯ ಚಲನಚಿತ್ರಗಳು ಏಕತಾನತೆಯನ್ನು ಉತ್ತೇಜಿಸುತ್ತಿವೆ. ಇಂತಹ ಚಲನಚಿತ್ರೋತ್ಸವಗಳು ಏಕತಾನತೆಯ ಪ್ರಯೋಗಗಳಿಗೆ ಸವಾಲು ಹಾಕಬೇಕು. ಸಿನಿಮಾ ಮಾತ್ರವಲ್ಲ, ಎಲ್ಲಾ ರಂಗಗಳಲ್ಲೂ ಬದಲಾವಣೆಗಳನ್ನು ತರಬೇಕಾದರೆ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಿನಿಮಾ ನಿರ್ದೇಶಕ ಅಭಯಸಿಂಹ ಮುಖ್ಯ ಅತಿಥಿಯಾಗಿದ್ದರು. ಉತ್ಸವದ ವಿದ್ಯಾರ್ಥಿ ಸಂಚಾಲಕ ಸಂದೀಪ್ ಕೆ. ಹಾಜರಿದ್ದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಸ್ವಾಗತಿಸಿದರು. ಅತಿಥಿ ಉಪನ್ಯಾಸಕ ಶಶಿಧರ ಮಂಚಿ ವಂದಿಸಿದರು. ವಿದ್ಯಾರ್ಥಿ ಚರಣ್ ನಿರೂಪಿಸಿದರು. ಹರ್ಷಿತ್ ಪಡ್ರೆ ಆಶಯ ನುಡಿಗಳನ್ನಾಡಿದರು.

ಉದ್ಘಾಟನೆ ಬಳಿಕ ಅಭಯಸಿಂಹ ನಿರ್ದೇಶನದ ಪಡ್ಡಾಯಿ ಚಿತ್ರ ಪ್ರದರ್ಶನ, ಚಿತ್ರತಂಡದೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಚಿತ್ರೋತ್ಸವ ಪ್ರಯುಕ್ತ ಶುದ್ಧಿ, ಅಮ್ಮಚ್ಚಿಯೆಂಬ ನೆನಪು, ಹೆಬ್ಬೆಟ್ ರಾಮಕ್ಕ, ನಾತಿಚರಾಮಿ ಚಿತ್ರಗಳ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News