ಮಹಾರಾಷ್ಟ್ರದಲ್ಲಿ ಮಲ್ಪೆಯ ಮೀನುಗಾರಿಕಾ ಬೋಟು ಮುಳುಗಡೆ: 7 ಮಂದಿ ಮೀನುಗಾರರ ರಕ್ಷಣೆ

Update: 2019-04-09 12:48 GMT

ಮಲ್ಪೆ, ಎ.9: ಮಹಾರಾಷ್ಟ್ರದ ದೇವಗಡ ಸಮೀಪದ ಆಳ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅವಘಡದಿಂದ ಮಲ್ಪೆ ಬಂದರಿನಿಂದ ತೆರಳಿದ್ದ ಬೋಟೊಂದು ಮುಳುಗಡೆಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.

ಮುಳುಗಡೆಯಾದ ಪಡುತೋನ್ಸೆ ಬೆಂಗ್ರೆ ಹೂಡೆಯ ದಿನೇಶ್ ತಿಂಗಳಾಯ ಎಂಬವರಿಗೆ ಸೇರಿದ ‘ಶಿವರಕ್ಷ’ ಹೆಸರಿನ ಆಳಸಮುದ್ರ ಸ್ಟೀಲ್‌ಬೋಟಿನಲ್ಲಿದ್ದ ಭಟ್ಕಳದ ಮೀನುಗಾರರಾದ ಸುನೀಲ್ ಮಂಜುನಾಥ್, ಸುರೇಶ್ ಮಂಜು ನಾಥ್, ಜಗನ್ನಾಥ ರಾಮ, ಪ್ರಶಾಂತ್ ಮೂಡಗಿ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್ ಧರ್ಮ ಎಂಬವರನ್ನು ರಕ್ಷಿಸಲಾಗಿದೆ.

ಎ.6ರಂದು ರಾತ್ರಿ ಮಲ್ಪೆ ಬಂದರಿನಿಂದ ಹೊರಟ ಶಿವರಕ್ಷ ಬೋಟ್ ಮಹಾರಾಷ್ಟ್ರದ ರತ್ನಾಗಿರಿ ಸಮೀಪ ಸುಮಾರು 42 ಮಾರು ಆಳ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತೆನ್ನಲಾಗಿದೆ. ಈ ಸಂದರ್ಭ ಬೋಟಿನ ಅಡಿಭಾಗಕ್ಕೆ ಯಾವುದೋ ವಸ್ತು ಢಿಕ್ಕಿ ಹೊಡೆದು ನೀರು ಬೋಟಿನೊಳಗೆ ಬರಲು ಆರಂಭಿಸಿತು. ಕೂಡಲೇ ಬೋಟಿನಲ್ಲಿದ್ದ ಮೀನುಗಾರರು ಸಮೀಪದಲ್ಲಿ ಬೋಟಿನವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಸಮೀಪದಲ್ಲಿದ್ದ ಶಿವತೇಜಸ್ ಬೋಟಿನ ಮೀನುಗಾರರು ಮುಳುಗುತ್ತಿದ್ದ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಬಳಿಕ ಶಿವತೇಜಸ್, ವರಸಿದ್ದಿ, ಹನುಮ ಸಾನಿಧ್ಯ ಮತ್ತು ರಾಧಾಂಬಿಕ ಎಂಬ ಹೆಸರಿನ ಬೋಟುಗಳು ಮುಳುಗುತ್ತಿದ್ದ ಶಿವಕ್ಷ ಬೋಟನ್ನು ಎಳೆದು ತಂದಿತು.

ಈ ಮಧ್ಯೆ ಸುಮಾರು 34 ಮಾರು ಆಳದೂರದಲ್ಲಿ ದೇವಗಡ ಸಮೀಪ ಎಳೆದು ತರುತ್ತಿದ್ದಾಗ ಶಿವರಕ್ಷ ಬೋಟ್ ಸಂಪೂರ್ಣ ಮುಳುಗಡೆಗೊಂಡಿತೆನ್ನ ಲಾಗಿದೆ. ಇದರಿಂದ ಬೋಟನಲ್ಲಿದ್ದ 8ಸಾವಿರ ಲೀಟರ್ ಡಿಸೇಲ್, ಬಲೆ, ಜಿಪಿಎಸ್, ಹಿಡಿದ ಮೀನುಗಳು ಸೇರಿದಂತೆ ಒಟ್ಟು 90 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News