×
Ad

ಆಶ್ರಯ ಪಡೆದ ಸ್ಥಳದಿಂದಲೇ ಮಹಿಳೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಬಹುದು: ಸುಪ್ರೀಂ

Update: 2019-04-09 19:23 IST

ಹೊಸದಿಲ್ಲಿ, ಎ.9: ವರದಕ್ಷಿಣೆ ಕಿರುಕುಳದಿಂದ ಗಂಡನ ಮನೆಯಿಂದ ಹೊರಬಿದ್ದ ಮಹಿಳೆ ತಾನು ಆಶ್ರಯ ಪಡೆದ ಸ್ಥಳದಿಂದಲೇ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ.

ದಂಡ ಪ್ರಕ್ರಿಯಾ ಸಂಹಿತೆಯ 177ನೇ ವಿಧಿಯಲ್ಲಿರುವ ‘ಅಪರಾಧ ಘಟನೆ ನಡೆದ ಪ್ರದೇಶದ ವ್ಯಾಪ್ತಿಯ ನ್ಯಾಯಾಲಯದಲ್ಲಿ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು’ ಎಂಬ ಷರತ್ತನ್ನು ಸಡಿಲಿಸಿದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠವು , ಕೌಟುಂಬಿಕ ಹಿಂಸೆಯಿಂದ ಗಂಡನ ಮನೆಬಿಟ್ಟು ಬರಬೇಕಾದ ಮಹಿಳೆ ತಾನು ಈಗ ಆಶ್ರಯ ಪಡೆದಿರುವ ಸ್ಥಳದಿಂದಲೇ ಗಂಡನ ಹಾಗೂ ಆತನ ಕುಟುಂಬದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದೆ.

ಉತ್ತರಪ್ರದೇಶದ ರೂಪಾಲಿ ದೇವಿ ಎಂಬವರು ವರದಕ್ಷಿಣೆ ಕಿರುಕುಳದಿಂದಾಗಿ ಗಂಡನ ಮನೆಬಿಟ್ಟು ಬಂದಿದ್ದು, ಬಳಿಕ ತನ್ನ ಹೆತ್ತವರ ಮನೆಯಲ್ಲೇ ವಾಸವಿದ್ದರು.ಅಲ್ಲಿಂದಲೇ ಗಂಡನ ಮನೆಯವರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಅಲಹಾಬಾದ್ ನ್ಯಾಯಾಲಯ ನಿರಾಕರಿಸಿದ್ದು, ಗಂಡನ ಮನೆ ಯಾವ ನ್ಯಾಯಾಲಯದ ವ್ಯಾಪ್ತಿಯಲ್ಲಿದೆಯೋ ಅಲ್ಲಿ ಪ್ರಕರಣ ದಾಖಲಿಸುವಂತೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News