ಬಿಜೆಪಿ ಪ್ರಣಾಳಿಕೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ರವಿಶಂಕರ್ ಪ್ರಸಾದ್

Update: 2019-04-09 14:26 GMT

ಹೊಸದಿಲ್ಲಿ, ಎ.9: ಬಿಜೆಪಿಯ ಪ್ರಣಾಳಿಕೆ ಕುರಿತಾದ ನೇರ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಕಾನೂನು, ನ್ಯಾಯ ಮತ್ತು ಐಟಿ ಸಚಿವ ರವಿ ಶಂಕರ್ ಪ್ರಸಾದ್ ಅವರು ನಿರೂಪಕರ ಪ್ರಶ್ನೆಯಿಂದ ಕೋಪಗೊಂಡು ಕಾರ್ಯಕ್ರಮದಿಂದ ಹೊರನಡೆದ ಘಟನೆ ಎಪ್ರಿಲ್ 8ರಂದು ನಡೆದಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿನ ರಾಮ ಮಂದಿರ ನಿರ್ಮಾಣ ಭರವಸೆ, ಸಂವಿಧಾನದ 370 ವಿಧಿ ರದ್ದುಗೊಳಿಸುವ ಹಾಗೂ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಭರವಸೆಯ ಬಗ್ಗೆ ಸಚಿವರಿಗೆ ಪ್ರಶ್ನೆ ಕೇಳಲಾಗಿತ್ತು.

ಆದರೆ ಕಾರ್ಯಕ್ರಮದ ನಿರೂಪಕರು ತಮಗೆ ಪ್ರಶ್ನೆ ಕೇಳಿದ ವೈಖರಿಯಿಂದ ರವಿ ಶಂಕರ್ ಪ್ರಸಾದ್ ಕೆರಳಿದ್ದರಲ್ಲದೆ ತಾವೊಬ್ಬ ಕೇಂದ್ರ ಸಚಿವ ಎಂದು ಅವರಿಗೆ ನೆನಪಿಸಿ ಸರಿಯಾಗಿ ಕೇಳಲಾದ ಪ್ರಶ್ನೆಗೆ ಮಾತ್ರ ಉತ್ತರಿಸುವುದಾಗಿಯೂ ಹೇಳಿದ್ದರು.

“ನೋಡಿ. ನೀವು ನನ್ನ ಜತೆ ಸರಿಯಾಗಿ ಮಾತನಾಡಿದರೆ ಮಾತ್ರ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ನೀವು ಹಿರಿಯ ಸಂಪಾದಕರಾಗಿದ್ದರೆ, ನಾನು ಕೂಡ ಈ ದೇಶದ ಹಿರಿಯ ರಾಜಕಾರಣಿ. ನೀವು ನನ್ನೊಂದಿಗೆ ಸಡಿಲವಾಗಿ ಮಾತನಾಡಿದರೆ ನಾನು ನಿಮಗೆ ನಮಸ್ತೆ ಎಂದು ಹೇಳಬೇಕಾಗುತ್ತದೆ'' ಎಂದು ಸಚಿವ ಹೇಳುತ್ತಿರುವುದು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ವೀಡಿಯೋದಿಂದ ತಿಳಿದು ಬರುತ್ತದೆ.

ಹಾಗೆ ಹೇಳಿದ ನಂತರ ಸಚಿವರು ತಮ್ಮ ಇಯರ್ ಫೋನ್ ತೆಗೆದು ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News