ನೌಕಾಪಡೆ ಮುಖ್ಯಸ್ಥರ ನೇಮಕಾತಿ ವಿರುದ್ಧದ ಮನವಿ ಹಿಂಪಡೆದ ಬಿಮಲ್ ವರ್ಮಾ

Update: 2019-04-09 15:37 GMT

ಹೊಸದಿಲ್ಲಿ,ಎ.9: ವೈಸ್ ಅಡ್ಮಿರಲ್ ಕರಮ್‌ಬೀರ್ ಸಿಂಗ್ ಅವರನ್ನು ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಹಿಂಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ನೌಕಾಪಡೆ ಕಾಯ್ದೆಯಡಿ ರಕ್ಷಣಾ ಸಚಿವಾಲಯಕ್ಕೆ ಶಾಸನಬದ್ಧ ದೂರು ನೀಡುವಂತೆ ಸಶಸ್ತ್ರಪಡೆಗಳ ನ್ಯಾಯಾಧೀಕರಣ ಸೂಚಿಸಿದ ನಂತರ ವರ್ಮಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಮಾ ಅವರ ಮನವಿಯನ್ನು ಆಲಿಸದೇ ಇದ್ದಲ್ಲಿ ಅವರು ಮರಳಿ ನ್ಯಾಯಾಧೀಕರಣದಲ್ಲಿ ದೂರು ದಾಖಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಮೇ 31ರಂದು ನಿವೃತ್ತಿ ಹೊಂದುತ್ತಿದ್ದು ನಂತರ ವೈಸ್ ಅಡ್ಮಿರಲ್ ಕರಮ್‌ಬೀರ್ ಸಿಂಗ್ ಅಧಿಕಾರ ಸ್ವೀಕರಿಸುತ್ತಿರುವ ಕಾರಣ ತನ್ನ ಮನವಿಯ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಬೇಕು ಎಂದು ಅಡ್ಮಿರಲ್ ವರ್ಮಾ, ತನ್ನ ಪುತ್ರಿ, ವಕೀಲೆ ರಿಯಾ ವರ್ಮಾ ಮತ್ತು ಹಿರಿಯ ನ್ಯಾಯವಾದಿ ಅಂಕುರ್ ಚಿಬ್ಬರ್ ಮೂಲಕ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.

ವರ್ಮಾ ಮನವಿಯನ್ನು ತಳ್ಳಿಹಾಕಿದ ಸಶಸ್ತ್ರ ಪಡೆಗಳ ನ್ಯಾಯಾಧೀಕರಣದ ನ್ಯಾಯಾಧೀಶರು, ತಾವು ಭಾರತೀಯ ಸರಕಾರದ ಸಲಹೆಗಾರರಂತೆ ವರ್ತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕರಮ್‌ಬೀರ್ ಸಿಂಗ್ ಅವರನ್ನು ಸರಕಾರ ಕಳೆದ ತಿಂಗಳು ಮುಂದಿನ ನೌಕಾಪಡೆ ಮುಖ್ಯಸ್ಥರನ್ನಾಗಿ ನೇಮಿಸಿದೆ. ಆದರೆ ಸಿಂಗ್ ಅಡ್ಮಿರಲ್ ವರ್ಮಾಗಿಂತ ಆರು ತಿಂಗಳು ಕಿರಿಯವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News