×
Ad

ಆಸ್ಪತ್ರೆಯಲ್ಲಿ ಮಗು ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ

Update: 2019-04-09 21:30 IST

ಪುತ್ತೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಮಗುವೊಂದು ಮೃತಪಟ್ಟಿದ್ದು, ಮಗುವಿನ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಪುತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಹರಿಶ್ಚಂದ್ರ ಹಾಗೂ ಪ್ರೇಮ ದಂಪತಿಯ ಪುತ್ರ ಯದ್ವೀಶ್ (5) ಮೃತಪಟ್ಟ ಬಾಲಕ. ಯಧ್ವೀಶ್‍ಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಈ ಖಾಸಗಿ ಆಸ್ಪತ್ರೆಗೆ ಕರೆತಂದು ಔಷಧಿ ಪಡೆದುಕೊಂಡು ತೆರಳಿದ್ದರು. ಆದರೆ ಜ್ವರ ಕಡಿಮೆಯಾಗದೆ ಇದ್ದ ಕಾರಣ ಮಂಗಳವಾರ ಮಧ್ಯಾಹ್ನ ಪುನಃ ಆಸ್ಪತ್ರೆಗೆ ಕರೆ ತಂದಿದ್ದರು. ಈ ಸಂದರ್ಭದಲ್ಲಿ ಮಗುವನ್ನು ಪರೀಕ್ಷಿಸಿದ ಇಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಬೇಕಾಗಿದೆ ಎಂದು ಹೇಳಿ ದಾಖಲಾಗುವಂತೆ ತಿಳಿಸಿದ್ದರು.  ಬಾಲಕನನ್ನು ದಾಖಲಿಸಿದ ಬಳಿಕ ನರ್ಸ್ ಒಬ್ಬರು ಬಂದು ಇಂಜೆಕ್ಷನ್ ಮತ್ತು ಒಂದು ಚಮಚ ಸಿರಾಪ್ ನೀಡಿದ್ದಾರೆ. ತಕ್ಷಣವೇ ಬಾಲಕ ವಾಂತಿ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿರುವುದಾಗಿ ಮೃತ ಬಾಲಕನ ತಂದೆ ತಿಳಿಸಿ ದ್ದಾರೆ. ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಮಗು ಮೃತಪಟ್ಟ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಬಳಿಕ ಮಾತುಕತೆ ನಡೆಸಿ ಕುಟುಂಬಸ್ಥರು ಮಗುವಿನ ಮೃತದೇಹವನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News