×
Ad

ಕ್ರಿಕೆಟ್ ಬೆಟ್ಟಿಂಗ್; ಮತ್ತೆ ಮೂವರ ಸೆರೆ: ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

Update: 2019-04-09 21:53 IST

ಮಂಗಳೂರು, ಎ.9: ನಗರದ ಮಠದಕಣಿಯಲ್ಲಿ ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸೋಮವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ, ಲಕ್ಷಾಂತರ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಮಠದಕಣಿ ನಿವಾಸಿಗಳಾದ ಸುನಿಲ್ ಮೆಲ್ವಿನ್ ರೇಗೋ (42), ಸಂತೋಷ್ ಜಾನ್ (47) ಹಾಗೂ ಉಳ್ಳಾಲಬೈಲು ನಿವಾಸಿ ಅಶೋಕ್ ಅಂಚನ್ (46) ಬಂಧಿತ ಆರೋಪಿಗಳು.

ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆಗಾಗಿ ‘ಬೆಟ್‌ಪ್ರೊ’ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿದ ಗ್ರಾಹಕರಿಗೆ ಈ ಆ್ಯಪ್‌ಗೆ ಹಣವನ್ನು ರಿಚಾರ್ಜ್ ಮಾಡುವುದು ಹಾಗೂ ಪಾಸ್‌ವರ್ಡ್‌ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರು. ನಂತರ ವಿದೇಶದಲ್ಲಿರುವ ಅರುಣ್ ಮೊಂತೆರೋ ಹಾಗೂ ಕಿರಣ್ ಎಂಬವರಿಗೆ ಹಣವನ್ನು ಸಂದಾಯ ಮಾಡಿದಾಗ ಅವರು ಆ್ಯಪ್‌ನ ಪಾಸ್‌ವರ್ಡ್‌ನ್ನು ಗ್ರಾಹಕರಿಗೆ ನೀಡುತ್ತಿದ್ದರು. ಈ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೃತ್ಯದಲ್ಲಿ ಇನ್ನು ಇತರರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರಿಂದ ವಂಚಿಸುತ್ತಿದ್ದ 4.25 ಲಕ್ಷ ರೂ. ನಗದು ಮತ್ತು ಐದು ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 4.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಪಿಎಸ್‌ಐ ಕಬ್ಬಾಳ್‌ರಾಜ್, ಶಂಕರ ನಾಯರಿ ಮತ್ತು ಸಿಸಿಬಿ ಸಿಬ್ಬಂದಿ ಹಾಗೂ ಮಂಗಳೂರು ಬರ್ಕೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೂರಜ್, ಪಿಎಸ್‌ಐ ಹೀರಾವತಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಬಂಧಿತರ ಸಂಖ್ಯೆ 20ಕ್ಕೆ ಏರಿಕೆ: ಐಪಿಎಲ್ ಕ್ರಿಕೆಟ್ ಆರಂಭಗೊಳ್ಳುತ್ತಿದ್ದಂತೆ ಬೆಟ್ಟಿಂಗ್‌ನಲ್ಲಿ ತೊಡಗದಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆದರೂ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಇದು ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ದ 6ನೇ ಪ್ರಕರಣವಾಗಿದೆ.

ಈ ಹಿಂದೆ ಮಾ.26ರಂದು ಮೂವರನ್ನು ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರು ಬಿಜೈ ಬಳಿ ಬಂಧಿಸಿ, 62,700 ರೂ. ನಗದು ಹಾಗೂ 4 ಮೊಬೈಲ್ ವಶಪಡಿಸಿಕೊಂಡಿದ್ದರು. ಆ ಬಳಿಕ ಮಾ.29ರಂದು ಪಣಂಬೂರು ಮೀನಕಳಿಯ ಸಮುದ್ರ ಕಿನಾರೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹದಳ ಪೊಲೀಸರು ಬಂಧಿಸಿ 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.

ಮಾ.31ರಂದು ಗೋವಾ ಮೂಲಕ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 3.99 ಲಕ್ಷ ರೂ. ವಶಪಡಿಸಿಕೊಂಡಿದ್ದರು. ಎ.3ರಂದು ಬೆಟ್ಟಿಂಗ್ ನಿರತ ಮೂವರನ್ನು ಕಾವೂರು ಪೊಲೀಸರು ಬಂಧಿಸಿ 26 ಸಾವಿರ ರೂ. ಹಾಗೂ 4 ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು.
ಎ.4ರಂದು ಮೂಡುಶೆಡ್ಡೆ ಗಾಲ್ಫ್ ಕ್ಲಬ್ ಬಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹದಳ ಹಾಗೂ ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ಆರೋಪಿಗಳಿಂದ 26 ಸಾವಿರ ರೂ. ಸಹಿತ 66 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, ಬಿಜೈ ನ್ಯೂ ರೋಡ್‌ನ ಅಪಾರ್ಟ್‌ಮೆಂಟ್ ಮತ್ತು ಬಿಜೈ ವಸತಿಗೃಹವೊಂದರಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆ ಉರ್ವ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News