ಮುಂಬೈ ದಾಳಿ ಪಿತೂರಿಗಾರನ ಜಾಮೀನು ರದ್ದುಪಡಿಸಲು ಪಾಕ್ ಮನವಿ

Update: 2019-04-09 16:34 GMT

ಇಸ್ಲಾಮಾಬಾದ್, ಎ. 9: ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯ ಆಪರೇಶನ್ಸ್ ಕಮಾಂಡರ್ ಝಕಿವುರ್ ರಹ್ಮಾನ್ ಲಾಖ್ವಿಗೆ ನೀಡಲಾಗಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಲಾಖ್ವಿ ಸೇರಿದಂತೆ ಏಳು ಶಂಕಿತರ ವಿರುದ್ಧ ಒಂದು ದಶಕದ ಅವಧಿಯಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ.

ಲಾಖ್ವಿಗೆ 2015 ಎಪ್ರಿಲ್‌ನಲ್ಲಿ ಜಾಮೀನು ನೀಡಲಾಗಿತ್ತು. ಈಗ ಅವನು ಎಲ್ಲಿದ್ದಾನೆಂದು ಗೊತ್ತಿಲ್ಲ. ಇತರ ಆರು ಮಂದಿ ಆರೋಪಿಗಳನ್ನು ರಾವಲ್ಪಿಂಡಿಯ ಅತಿ ಭದ್ರತೆಯ ಅಡಿಯಾಲ ಜೈಲಿನಲ್ಲಿ ಇಡಲಾಗಿದೆ.

ನ್ಯಾಯಾಲಯವು ಮುಂಬೈ ದಾಳಿ ವಿಚಾರಣೆಯನ್ನು ಈ ವರ್ಷದ ಜನವರಿಯಲ್ಲಿ ತಡೆಹಿಡಿದಿತ್ತು. ಈವರೆಗೆ ಸಾಕ್ಷಿ ಹೇಳದ 19 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ಪ್ರಾಸಿಕ್ಯೂಶನ್‌ಗೆ ಸಾಧ್ಯವಾಗುವಂತೆ ನ್ಯಾಯಾಲಯ ಈ ಕ್ರಮ ತೆಗೆದುಕೊಂಡಿತ್ತು. ಕೆಲವು ಸಾಕ್ಷಿಗಳು ಹೆದರಿಕೆಯಿಂದಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News