ವಲಸಿಗರನ್ನು ಮೆಕ್ಸಿಕೊಗೆ ವಾಪಸ್ ಕಳುಹಿಸುವ ಟ್ರಂಪ್ ನೀತಿಗೆ ನ್ಯಾಯಾಲಯ ತಡೆ

Update: 2019-04-09 16:41 GMT

ಲಾಸ್ ಏಂಜಲಿಸ್, ಎ. 9: ಆಶ್ರಯ ಕೋರಿ ಬಂದವರ ಅರ್ಜಿ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರನ್ನು ಮೆಕ್ಸಿಕೊಗೆ ಹಿಂದಕ್ಕೆ ಕಳುಹಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿಗೆ ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ಸೋಮವಾರ ತಡೆ ನೀಡಿದ್ದಾರೆ ಹಾಗೂ ಈ ವಿಷಯದಲ್ಲಿ ಆಂತರಿಕ ಭದ್ರತೆ ಇಲಾಖೆಯು ತನ್ನ ಅಧಿಕಾರವನ್ನು ಮೀರಿ ವರ್ತಿಸಿದೆ ಎಂದು ಹೇಳಿದ್ದಾರೆ.

ಸ್ಯಾನ್‌ಫ್ರಾನ್ಸಿಸ್ಕೊದ ಜಿಲ್ಲಾ ನ್ಯಾಯಾಧೀಶ ರಿಚರ್ಡ್ ಸೀಬೋರ್ಗ್ ನೀಡಿರುವ ತೀರ್ಪು, ಆಶ್ರಯ ಕೋರಿ ಮೆಕ್ಸಿಕೊ ಗಡಿಯ ಮೂಲಕ ಅಮೆರಿಕಕ್ಕೆ ಬರುವ ವಲಸಿಗರನ್ನು ನಿಯಂತ್ರಿಸುವ ಟ್ರಂಪ್ ಆಡಳಿತದ ಪ್ರಯತ್ನಗಳಿಗೆ ತೀವ್ರ ಹಿನ್ನಡೆಯಾಗಿದೆ.

ಅಮೆರಿಕ ಆಂತರಿಕ ಭದ್ರತೆ ಇಲಾಖೆಯ ಈ ನೀತಿಯನ್ನು ಮೊದಲು ಜನವರಿಯಲ್ಲಿ ಕ್ಯಾಲಿಫೋರ್ನಿಯದ ಸಾನ್ ಯಸಿಡ್ರೊ ಪ್ರವೇಶ ದ್ವಾರದಲ್ಲಿ ಜಾರಿಗೊಳಿಸಲಾಗಿತ್ತು ಹಾಗೂ ಬಳಿಕ ಅದನ್ನು ಕ್ಯಾಲಿಫೋರ್ನಿಯದ ಇನ್ನೊಂದು ಪ್ರವೇಶ ದ್ವಾರ ಕ್ಯಾಲೆಕ್ಸಿಕೊ ಮತ್ತು ಟೆಕ್ಸಾಸ್‌ನಲ್ಲಿರುವ ಎಲ್ ಪಾಸೊಗೆ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಆಶ್ರಯ ಕೋರಿ ಬಂದ ಹಲವು ನೂರು ಮಂದಿಯನ್ನು ವಾಪಸ್ ಕಳುಹಿಸಲಾಗಿತ್ತು.

ಮಾನವಹಕ್ಕು ಸಂಘಟನೆಗಳು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿವೆ. ‘ಮೈಗ್ರಾಂಟ್ ಪ್ರೊಟೆಕ್ಶನ್ ಪ್ರೊಟೊಕಾಲ್ಸ್’ (ಎಂಪಿಪಿ) ಎಂಬ ಈ ನೀತಿಯು, ಆಶ್ರಯ ಕೋರಿಕೆದಾರರಿಗೆ ಶಿಕ್ಷೆಯಿಂದ ಪಾರಾಗಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಒದಗಿಸಿಲ್ಲ ಎಂಬುದಾಗಿ ಅವುಗಳು ಅಭಿಪ್ರಾಯಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News