ಜಮಾಲ್ ಖಶೋಗಿ ಹತ್ಯೆ ಪ್ರಕರಣ: 16 ಸೌದಿ ರಾಷ್ಟ್ರೀಯರ ಅಮೆರಿಕ ಪ್ರವೇಶಕ್ಕೆ ನಿಷೇಧ

Update: 2019-04-09 16:59 GMT

ವಾಶಿಂಗ್ಟನ್, ಎ. 9: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ವಹಿಸಿರುವ ಪಾತ್ರಕ್ಕಾಗಿ 16 ಸೌದಿ ರಾಷ್ಟ್ರೀಯರು ಅಮೆರಿಕ ಪ್ರವೇಶಿಸುವುದನ್ನು ಅಮೆರಿಕ ಸೋಮವಾರ ನಿಷೇಧಿಸಿದೆ.

ಖಶೋಗಿ ಹತ್ಯೆಗೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್ ಆಡಳಿತದ ಧೋರಣೆಗೆ ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಈ ವಿಷಯವನ್ನು ಘೋಷಿಸಿದ್ದಾರೆ.

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ತೀವ್ರ ಟೀಕಾಕಾರರಾಗಿದ್ದ ಖಶೋಗಿಯನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಕಳೆದ ವರ್ಷದ ಅಕ್ಟೋಬರ್ 2ರಂದು ಹತ್ಯೆಗೈಯಲಾಗಿತ್ತು. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಹತ್ಯೆಗೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನೇರ ಹೊಣೆ ಎಂಬುದಾಗಿ ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎಯ ವರದಿಯನ್ನು ಉಲ್ಲೇಖಿಸಿ ಅಮೆರಿಕದ ಹಲವು ಸಂಸದರು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ, ಅಮೆರಿಕ ವಿದೇಶಾಂಗ ಇಲಾಖೆ ಖಶೋಗಿ ಹತ್ಯೆಗೆ ಸಂಬಂಧಿಸಿ ಸುಮಾರು ಎರಡು ಡಝನ್ ಸೌದಿ ಅಧಿಕಾರಿಗಳ ವೀಸಾಗಳನ್ನು ರದ್ದುಗೊಳಿಸಿದೆ ಹಾಗೂ 17 ಮಂದಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News