ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಮತ ನೀಡಿ: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ

Update: 2019-04-09 17:06 GMT

ಔಸಾ, ಎ. 9: ಮಹಾರಾಷ್ಟ್ರದ ಮರಾಠಾವಾಡ ವಲಯದ ಲಾತೂರ್‌ನ ಸಮೀಪ ಔಸಾದಲ್ಲಿ ಮಂಗಳವಾರ ಆಯೋಜಿಸಲಾದ ಬೃಹತ್ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿಗೆ ಮತದಾರರಲ್ಲಿ ‘ದೇಶಕ್ಕೆ ಮತ ಹಾಕಿ’ ಎಂದು ಮನವಿ ಮಾಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಉದ್ಧವ್ ಠಾಕ್ರೆಯೊಂದಿಗೆ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಮೋದಿ, ಶಿವಸೇನೆ ಹಾಗೂ ಆ ಪಕ್ಷದಲ್ಲಿ ತೊಡಗಿಕೊಂಡ ಕುಟುಂಬ ಯಾವುದೇ ಅಧಿಕಾರದ ಹುದ್ದೆ ಪಡೆದುಕೊಳ್ಳುವಾಗ ತೋರಿಸಿದ ಸಂಯಮದ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದರು.

ಪ್ರಣಾಳಿಕೆಯಿಂದ ಹಿಡಿದು ಸರ್ಜಿಕಲ್ ಸ್ಟ್ರೈಕ್ ಹಾಗೂ ವಾಯು ದಾಳಿಯ ಅಧಿಕೃತತೆ ಬಗೆಗಿನ ಪ್ರಶ್ನೆ, ಭ್ರಷ್ಟಾಚಾರ ಸಹಿತ ಹಲವು ವಿಷಯಗಳ ಬಗ್ಗೆ ಪ್ರಧಾನಿ ತಮ್ಮ 40 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.

ತನ್ನ 40 ನಿಮಿಷಗಳ ಭಾಷಣದ ಅಂತ್ಯದಲ್ಲಿ ಮೋದಿ ಅವರು, 21ನೇ ಶತಮಾನದಲ್ಲಿ ಜನಿಸಿದ ಮತದಾರರನ್ನು ಸೆಳೆಯಲು ಪ್ರಯತ್ನಿಸಿದರು.

“ನಾವು ಮೊದಲ ಬಾರಿಗೆ ಏನು ಮಾಡಿದರೂ ಅದು ಜೀವಿತಾವಧಿವರೆಗಿನದ್ದು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ. ನೀವೆಲ್ಲರೂ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದೀರಿ. ನೀವೆಲ್ಲರೂ 21ನೇ ಶತಮಾನದಲ್ಲಿ ಜನಿಸಿದ್ದೀರಿ. ನೀವು ದೇಶಕ್ಕೆ ಮತ ಹಾಕಿ” ಎಂದು ಮೋದಿ ಮನವಿ ಮಾಡಿದರು.

ಯಾವುದೇ ತಪ್ಪು ಮಾಡಬೇಡಿ. ಮೊದಲ ಬಾರಿಗೆ ಮತ ಹಾಕುವಾಗ ದೇಶಕ್ಕೆ ಮತ ಹಾಕಿ ಎಂದು ಮೋದಿ ಅವರು ಬಿಜೆಪಿ , ಶಿವಸೇನೆ ಅಥವಾ ಅದರ ಮೈತ್ರಿ ಉಲ್ಲೇಖಿಸದೆ ಹೇಳಿದರು.

‘‘ದೇಶಕ್ಕೆ ಮತ ಹಾಕಿ. ದೇಶ ನಿಮಗೆ ಬಹಳಷ್ಟು ನೀಡಿದೆ. ಸಮಾಜ ನಿಮಗೆ ಬಹಳಷ್ಟು ನೀಡಿದೆ. ನಿಮ್ಮ ಹೆತ್ತವರು, ಅಧ್ಯಾಪಕರು, ವೈದ್ಯರನ್ನು ನೆನಪಿಸಿಕೊಳ್ಳಿ. ಮೊದಲ ಮತ ಕೂಡ ತುಂಬಾ ಪ್ರಮುಖವಾದುದು’’ ಎಂದು ಮೋದಿ ಹೇಳಿದರು.

‘‘ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಿಮ್ಮ ಮತ ನೀಡಿ, ಸರ್ಜಿಕಲ್ ಸ್ಟ್ರೈಕ್, ವಾಯು ದಾಳಿ ನಡೆಸಿದ ಶೂರ ಯೋಧರಿಗೆ ನಿಮ್ಮ ಮತ ನೀಡಿ, ಸೂರ್ಯನ ಉರಿ ಬಿಸಿಲನ್ನು ಲೆಕ್ಕಿಸದೆ ದುಡಿಯುತ್ತಿರುವ ರೈತರಿಗೆ ನಿಮ್ಮ ಮತ ನೀಡಿ, ಪ್ರತಿ ರೈತನಿಗೆ ನೀರಿನ ಭದ್ರತೆ ಖಾತರಿ ನೀಡುವುದಕ್ಕೆ ನಿಮ್ಮ ಮತ ನೀಡಿ, ಭಯೋತ್ಪಾದನೆ ನಿರ್ಮೂಲನೆ ಖಾತರಿ ನೀಡುವುದಕ್ಕೆ ನಿಮ್ಮ ಮತ ನೀಡಿ, ದೇಶಕ್ಕೆ ದೃಢವಾದ ಭದ್ರತೆಯ ಖಾತರಿ ನೀಡುವುದಕ್ಕೆ ನಿಮ್ಮ ಮತ ನೀಡಿ’’ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News