ಮಲ್ಪೆ ಬಂದರಿನಲ್ಲಿ ಪ್ರಮೋದ್ ಮಧ್ವರಾಜ್ ಮತಯಾಚನೆ

Update: 2019-04-10 14:17 GMT

ಮಲ್ಪೆ, ಎ.10: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮತಯಾಚನೆ ಮಾಡಿದರು.

ಬಳಿಕ ಮಾತನಾಡಿದ ಪ್ರಮೋದ್ ಮಧ್ವರಾಜ್, ಮೀನುಗಾರರ ಸಮಸ್ಯೆ ಬಗ್ಗೆ ಅರಿವು ಇರುವ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಮೀನುಗಾರಿಗೆ ತುಂಬಾ ಅನುಕೂಲವಾಗಬಹುದೆಂಬ ಭಾವನೆ ಮೀನುಗಾರರಲ್ಲಿ ಮೂಡಿದೆ. ಕಳೆದ ಐದು ವರ್ಷಗಳಲ್ಲಿ ಮೀನುಗಾರರಿಗೆ ಕೇಂದ್ರ ಸರಕಾರದಿಂದ ಯಾವುದೇ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಈ ಬಗ್ಗೆ ನಮ್ಮ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಮೀನುಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಎಲ್ಲ ಜಾತಿ, ಧರ್ಮಗಳ ಮೀನುಗಾರರು ಬೆಂಬಲ ಕೊಡಬೇಕು. ಮೀನುಗಾರರ ಅಳಿವು ಉಳಿವು ಪ್ರಶ್ನೆ ಬಂದಾಗ ನಾವೆಲ್ಲ ಒಂದಾಗಬೇಕು. ಮೀನುಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ನನ್ನನ್ನು ಈ ಬಾರಿ ಆಯ್ಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಗಳಲ್ಲಿ ಜನರು ಇಂದು ಬದಲಾವಣೆ ಬಯಸುತ್ತಿದ್ದಾರೆ. ಕೆಲಸ ಮಾಡದ ಸಂಸದರು ಬೇಡ, ಕೆಲಸ ಮಾಡುವ ಊರಿನ ಹಾಗೂ ಸ್ಥಳೀಯ ಅಭ್ಯರ್ಥಿ ನಮಗೆ ಬೇಕು ಎಂಬ ಭಾವನೆ ಎಲ್ಲ ಜನರಲ್ಲಿ ವ್ಯಕ್ತವಾಗುತ್ತಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಆರ್. ಸಭಾಪತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವ ರಾವ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ರಮೇಶ್ ಕಾಂಚನ್, ರಿಯಾಝ್ ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News