×
Ad

ಬಿಜೆಪಿ ಟೋಪಿ ಧರಿಸಲು ನಿರಾಕರಿಸಿದ ಮುಸ್ಲಿಂ ವಿದ್ಯಾರ್ಥಿನಿ ಕಾಲೇಜಿನಿಂದ ಅಮಾನತು!

Update: 2019-04-10 21:20 IST

ಲಕ್ನೊ, ಎ.10: ಬಿಜೆಪಿಯ ಟೋಪಿ (ಹ್ಯಾಟ್) ಧರಿಸಲು ನಿರಾಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಿದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಮೀರತ್‌ನ ದಿವಾನ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಕಳೆದ ವಾರ ಆಗ್ರಾಕ್ಕೆ ಪ್ರವಾಸ ತೆರಳಿದ್ದರು. ಈ ಸಂದರ್ಭ ಉಮಾಮ್ ಖಾನಂ ಎಂಬ ವಿದ್ಯಾರ್ಥಿನಿಯನ್ನು ಬಿಜೆಪಿಯ ಟೋಪಿ ಧರಿಸುವಂತೆ ಸಹಪಾಠಿಗಳು ಒತ್ತಾಯಮಾಡಿದ್ದರು. ಆಕೆ ನಿರಾಕರಿಸಿದಾಗ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಘಟನೆಯ ಕುರಿತು ಹೇಳಿಕೆ ನೀಡಲು ನಿರಾಕರಿಸಿದ ಕಾರಣ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಆಡಳಿತವರ್ಗ ತಿಳಿಸಿದೆ.

ಆದರೆ ಇದನ್ನು ನಿರಾಕರಿಸಿರುವ ವಿದ್ಯಾರ್ಥಿನಿ, ಕಾಲೇಜಿನ ವಿರುದ್ಧ ಮೀರತ್ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ. ಸುಳ್ಳು ಹೇಳಿಕೆ ನೀಡುವಂತೆ ಮತ್ತು ದೂರನ್ನು ವಾಪಾಸು ಪಡೆಯುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಕಾಲೇಜಿಗೆ ತೆರಳಲು ತನಗೆ ಭಯವಾಗುತ್ತಿದೆ. ಘಟನೆ ನಡೆದ ದಿನದಿಂದ ತಾನು ಶಾಲೆಗೇ ಹೋಗಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ವರ್ಗದವರು, ಎಲ್ಲರೂ ತನ್ನ ವಿರುದ್ಧವಿದ್ದಾರೆ. ಸಂಘಪರಿವಾರ ಕಾರ್ಯಕರ್ತರು ತನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಬೆದರಿಕೆಗೆ ತಾನು ಮಣಿಯುವುದಿಲ್ಲ. ಪೊಲೀಸ್ ಅಧೀಕ್ಷರಲ್ಲಿ ದೂರು ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

ಉಮಾಮ್ ಖಾನಂಗೆ ಕಿರುಕುಳ ನೀಡಿದ ಘಟನೆಯಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಉಚ್ಛಾಟಿಸಲಾಗಿತ್ತು. ಉಚ್ಚಾಟನೆ ಆದೇಶವನ್ನು ಹಿಂಪಡೆಯಬೇಕೆಂದು ಬಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ನ ಕಾರ್ಯಕರ್ತರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News