ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ: ದಾರಿಮಿ ಉಲಮಾ ಒಕ್ಕೂಟ ಕರೆ

Update: 2019-04-10 16:29 GMT

ಮಂಗಳೂರು, ಎ.10: ಜಗತ್ತಿನಲ್ಲೆ ಬಲಿಷ್ಠವಾದ ಪ್ರಜಾಪ್ರಭುತ್ವದ ಆಶಯವನ್ನು ಪ್ರತಿಪಾದಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತದ ಪರಮೋನ್ನತ ಶಾಸನ ಸಭೆಯಾಗಿರುವ ಲೋಕಸಭೆಗಾಗಿ ಚುನಾವಣೆಯನ್ನು ದೇಶ ಎದುರು ನೋಡುತ್ತಿದೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಕ್ರಿಯವಾಗಿ ಪಾಲ್ಗೊಂಡು ದೇಶೀಯ ರಾಜಕೀಯ ವ್ಯವಸ್ಥೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಸುರಕ್ಷತೆಗಾಗಿ ತನ್ನ ಕೊಡುಗೆಯನ್ನು ನೀಡಬೇಕಾ ಗಿದೆ ಎಂದು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟ ಕರೆ ನೀಡಿದೆ.

ಒಕ್ಕೂಟದ ಅಧ್ಯಕ್ಷ ಎಸ್.ಬಿ.ದಾರಿಮಿ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಉಲಮಾ ನಾಯಕರು, ಈ ಮಹತ್ವ ಪೂರ್ಣ ಕಾರ್ಯದಲ್ಲಿ ಪ್ರತಿಯೊಬ್ಬರೂ ಪ್ರಜ್ಞಾವಂತಿಕೆ ತೋರುತ್ತಾರೆಂಬ ಆಶಯವನ್ನು ಒಕ್ಕೂಟವು ಹೊಂದಿದೆ ಎಂದರು.

ರಾಷ್ಟ್ರದ ಬಹುದೊಡ್ಡ ಅಲ್ಪಸಂಖ್ಯಾತ ಮುಸ್ಲಿಮ್‌ ಸಮುದಾಯವನ್ನು ವಿವಿಧ ರಾಜಕೀಯ ಪಕ್ಷಗಳು ಈ ತನಕ ಶೋಷಣೆಗೊಳಪಡಿಸುತ್ತಲೆ ಬಂದಿದೆ. ಮುಸ್ಲಿಮರಿಗೆ ಅವಕಾಶ ನಿರಾಕರಣೆ ಮಾಡುತ್ತಿರುವುದು ಯಾರಿಂದಲೂ ನಿರಾಕರಿಸಲಾಗದ ಸತ್ಯವಾಗಿದೆ. ಇದೇ ಕಾರಣದಿಂದಾಗಿ ಮುಸ್ಲಿಮರಲ್ಲಿ ಭ್ರಮನಿರಸನ ಉಂಟಾಗಿದ್ದು ಕೂಡಾ ನಿಜ. ಆದರೆ ಇದನ್ನೇ ಅಸ್ತ್ರವಾಗಿಟ್ಟು ಕೊಂಡು ಸಂವಿಧಾನ ವಿರೋಧಿ ಶಕ್ತಿಗಳು ತಮ್ಮ ಜಾಲಗಳನ್ನು ವಿಸ್ತರಿಸುತ್ತಲೆ ಬಂದಿರುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಮುಸ್ಲಿಮ್ ಉಲಮಾ ಉಮರಾ ನಾಯಕರು ಚಿಂಥನ ಮಂಥನ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಈ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಕ್ಫ್ ಸೊತ್ತುಗಳು ಅತಿಕ್ರಮಣ ಗೊಂಡಿದ್ದು ಈ ಬಗ್ಗೆ ಜನ ಜಾಗೃತಿ ಮೂಡಿಸಿ ಅದನ್ನು ಮರಳಿ ಪಡೆಯುವ ತನಕ ಆಂದೋಲನವನ್ನು ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಾಹಿನ್ ದಾರಿಮಿ ಪಾತೂರು ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕ ಬೆಟ್ಟು ಸ್ವಾಗತಿಸಿ ಪ್ರಸ್ತಾವಗೈದರು.

ಅಬ್ದುರ್ರಹ್ಮಾನ್ ದಾರಿಮಿ ತಬೂಕು, ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ ಕಿನ್ಯ, ಇಸ್ಮಾಯೀಲ್ ದಾರಿಮಿ ಹಾಸನ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಹನೀಫ್ ದಾರಿಮಿ ಬೆಳ್ತಂಗಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News