ಕೇಂದ್ರ ಸಚಿವ ಅನಂತಕುಮಾರ್ ನಾಪತ್ತೆಯಾದ ಎಷ್ಟು ಮೀನುಗಾರರ ಮನೆಗೆ ಹೋಗಿದ್ದಾರೆ ?: ನಾಡಗೌಡ ಪ್ರಶ್ನೆ

Update: 2019-04-10 16:43 GMT

ಉಡುಪಿ, ಎ.10: ‘ಮೀನುಗಾರಿಕಾ ಸಚಿವನಾಗಿ ನಾನು ನಾಪತ್ತೆಯಾದ ಎಲ್ಲಾ ಏಳು ಮಂದಿ ಮೀನುಗಾರರ ಮನೆಗೆ ಹೋಗಿದ್ದೇನೆ. ರಾಜ್ಯ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಮೀನುಗಾರರ ಮನೆಗೆ ಹೋಗಿದ್ದಾರೆ. ಆದರೆ ಉತ್ತರ ಕನ್ನಡದ ಸಂಸದರಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ನಾಪತ್ತೆಯಾದ ಉತ್ತರಕನ್ನಡದ ಎಷ್ಟು ಮೀನುಗಾರರ ಮನೆಗೆ ತೆರಳಿದ್ದಾರೆಂಬುದನ್ನು ಬಿಜೆಪಿಗರು ಮೊದಲು ಹೇಳಲಿ’ ಎಂದು ರಾಜ್ಯ ಮೀನುಗಾರಿಕಾ ಹಾಗೂ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಗರಂ ಆಗಿ ಪ್ರಶ್ನಿಸಿದ್ದಾರೆ.

ಕಳೆದ ರವಿವಾರ ಉಡುಪಿಗೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಮೋದ್ ಮಧ್ವರಾಜ್‌ರ ಮನೆಗೆ ಊಟಕ್ಕೆ ಹೋದರೂ, ಅಲ್ಲೇ ಸಮೀಪದಲ್ಲಿದ್ದ ನಾಪತ್ತೆಯಾದ ಮೀನುಗಾರರ ಮನೆಗೆ ಹೋಗಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಬಗ್ಗೆ ಇಂದು ಸುದ್ದಿಗಾರರು ನಾಡಗೌಡರನ್ನು ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಅವರು ಹೀಗೆ ಮರು ಪ್ರಶ್ನೆ ಹಾಕಿದರು.

ಅನಂತಕುಮಾರ್ ಹೆಗಡೆ, ಮಲ್ಪೆಯ ಸುವರ್ಣ ತ್ರಿಭುಜ ಬೋಟಿನೊಂದಿಗೆ ನಾಪತ್ತೆಯಾದ ಉತ್ತರ ಕನ್ನಡದ ಐದು ಮಂದಿ ಮೀನುಗಾರ ಮನೆಯತ್ತ ಇದುವರೆಗೆ ತಲೆಹಾಕಿಲ್ಲ. ಈ ಐದು ಕುಟುಂಬಗಳು ಅವರದೇ ಕ್ಷೇತ್ರದ ಮತದಾರರು. ಹಾಗಾದರೆ ಸಂಸದನಾಗಿ ಅನಂತಕುಮಾರ್ ಹೆಗಡೆಗೆ ಜವಾಬ್ದಾರಿ ಇಲ್ಲವೇ? ಅವರು ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ. ಬಡ ಕುಟುಂಬಗಳಿಗೆ ಪರಿಹಾರ ಕೊಡಿಸಿದ್ದಾರಾ? ನಾಪತ್ತೆಯಾದವರ ಬಗ್ಗೆ ಮಾತನಾಡಿ ದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

ಬೋಟ್ ನಾಪತ್ತೆ: ಸುವರ್ಣ ತ್ರಿಭುಜ ಬೋಟಿನೊಂದಿಗೆ ನಾಪತ್ತೆ ಯಾಗಿರುವ ಏಳು ಮಂದಿ ಮೀನುಗಾರರ ಕುರಿತು ಸಚಿವರನ್ನು ಪ್ರಶ್ನಿಸಿದಾಗ, ಸಚಿವನಾಗಿ ನಾನು ಕಣ್ಮರೆಯಾದ ಉಡುಪಿ ಮತ್ತು ಉತ್ತರ ಕನ್ನಡದ ಏಳು ಮಂದಿ ಮೀನುಗಾರರ ಮನೆಗೂ ಹೋಗಿ ಬಂದಿದ್ದೇನೆ. ಅದೇ ರೀತಿ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ತೆರಳಿದ್ದಾರೆ. ನಾಪತ್ತೆಯಾದ ಪ್ರತಿಯೊಂದು ಕುಟುಂಬಕ್ಕೂ ತಲಾ ಒಂದು ಲಕ್ಷ ರೂ.ಗಳ ತಾತ್ಕಾಲಿಕ ಪರಿಹಾರವನ್ನೂ ಘೋಷಿಸಿದ್ದೇವೆ. ಅವರ ಪತ್ತೆಗೆ ನಮ್ಮೆಲ್ಲಾ ಪ್ರಯತ್ನಗಳನ್ನು ನಡೆಸುತಿದ್ದೇವೆ ಎಂದರು.

ಈ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲು ಅವರ ಅಪಾಯಿಂಟ್ ಮೆಂಟ್ ಕೇಳಿದ್ದೆವು. ಆದರೆ ಅವರು ನಮಗೆ ಅಪಾಯಿಂಟ್‌ಮೆಂಟ್ ಕೊಡಲಿಲ್ಲ ಎಂದು ನಾಡಗೌಡ ತಿಳಿಸಿದರು. ನನಗೆ ತಿಳಿದಂತೆ ರಾಜ್ಯ ಸರಕಾರದಂತೆ ಕೇಂದ್ರ ಸರಕಾರದ ಬಳಿ ಸಹ ಪ್ರಕರಣದ ಕುರಿತು ಏನೂ ಹೇಳಲು ನಿಖರ ಮಾಹಿತಿಗಳಿಲ್ಲ ಎಂದವರು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನೌಕಾದಳವೂ ಬೋಟಿಗಾಗಿ ಸಾಕಷ್ಟು ಹುಡುಕಾಟ ನಡೆಸಿದೆ. ಈ ತನಕ ಯಾವುದೇ ನಿಖರ ಮಾಹಿತಿಗಳು ಸಿಕ್ಕಿಲ್ಲ ಎಂದವರು ಹೇಳಿದ್ದಾರೆ ಎಂದರು.

ಬೋಟಿಗೆ ಎನ್‌ಎಂಆರ್ ಉಪಕರಣ: ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟು ನಾಪತ್ತೆಯಾದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಬಳಿಕ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಎಲ್ಲಾ ಬೋಟು ಗಳಿಗೆ ಎನ್‌ಎಂಆರ್ (ನೇವಿಗೇಶಲ್ ಮೆಸೇಜ್ ರಿಸೀವರ್) ಉಪಕರಣ ಬಳಕೆಯನ್ನು ಕಡ್ಡಾಯ ಗೊಳಿಸುವುದಾಗಿ ಅವರು ತಿಳಿಸಿದರು.

ಸುವರ್ಣ ತ್ರಿುಜಮೀನುಗಾರಿಕಾಬೋಟುನಾಪತ್ತೆಯಾದಹಿನ್ನೆಲೆಯಲ್ಲಿಲೋಕಸಾ ಚುನಾವಣೆಯ ಬಳಿಕ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಎಲ್ಲಾ ಬೋಟು ಗಳಿಗೆ ಎನ್‌ಎಂಆರ್ (ನೇವಿಗೇಶಲ್ ಮೆಸೇಜ್ ರಿಸೀವರ್) ಉಪಕರಣ ಬಳಕೆಯನ್ನು ಕಡ್ಡಾಯ ಗೊಳಿಸುವುದಾಗಿ ಅವರು ತಿಳಿಸಿದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೋ ಶಿಫಾರಸ್ಸು ಮಾಡಿದ ಈ ಉಪಕರಣದ ಬಳಕೆಗಾಗಿ ಈ ಬಾರಿಯ ಬಜೆಟ್‌ನಲ್ಲಿ ಮೂರು ಕೋಟಿ ರೂ.ಗಳ ಪ್ರಸ್ತಾಪವನ್ನು ಇರಿಸಲಾಗಿದೆ. ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ, ಆಳಸಮುದ್ರ ಮೀನುಗಾರಿಕೆ ತೆರಳುವ ಬೋಟುಗಳ ಎಲ್ಲಾ ಸಂದೇಶಗಳನ್ನು ತಕ್ಷಣವೇ ಒದಗಿಸುವ ಈ ಉಪಕರಣದ ಕುರಿತು ವಿಸ್ತೃತ ಮಾಹಿತಿಗಳನ್ನು ಮುಂದೆ ಒದಗಿಸಲಾಗುವುದು. ಈ ಯಂತ್ರ ದಿಂದ ಬೋಟು ಅಪಾಯಕ್ಕೆ ಸಿಲುಕಿದರೆ ಅದರ ಕುರಿತು ನಿಖರವಾದ ಮಾಹಿತಿ ಲಭಿಸುತ್ತದೆ ಎಂದರು.

ಸೀಮೆಎಣ್ಣೆಗೆ 19.5 ಕೋಟಿ ರೂ.: ಇತ್ತೀಚೆಗೆ ಯಾಂತ್ರೀಕೃತ ನಾಡದೋಣಿಗೆ ಬಳಸುವ ಸೀಮೆಎಣ್ಣೆಗಾಗಿ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರಕಾರ ಸೀಮೆಎಣ್ಣೆ ಸರಬರಾಜನ್ನೇ ನಿಲ್ಲಿಸಿರುವುದರಿಂದ ನಮಗೆ ಕಷ್ಟವಾಗಿತ್ತು. ಈಗ ಈ ಸಲದ ಬಜೆಟ್‌ನಲ್ಲಿ ಮೀನುಗಾರಿಕಾ ದೋಣಿಗಳಿಗೆ ಬಳಸುವ ಸೀಮೆ ಎಣ್ಣೆಗಾಗಿ 19.5 ಕೋಟಿ ರೂ.ಗಳ ಪ್ರಸ್ತಾಪ ವನ್ನು ಬಜೆಟ್‌ನಲ್ಲಿ ಇರಿಸಲಾಗಿದೆ. ಇದರಿಂದ ದೋಣಿಗೆ ಪ್ರತಿ ತಿಂಗಳು ಸೀಮೆಎಣ್ಣೆಯನ್ನು ಒದಗಿಸಲಾ ಗುವುದು. ಅಲ್ಲದೇ ಡೀಸೆಲ್‌ಗಾಗಿಯೂ 146.5ಕೋಟಿ ರೂ.ಗಳ ಪ್ರಸ್ತಾಪ ಬಜೆಟ್‌ನಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News