×
Ad

ಭ್ರಷ್ಟರನ್ನು ಜೈಲಿನ ಬಾಗಿಲುಗಳ ಬಳಿ ತಂದಿದ್ದೇನೆ, ಇನ್ನು 5 ವರ್ಷ ನೀಡಿದರೆ ಜೈಲಿಗಟ್ಟುತ್ತೇನೆ: ಮೋದಿ

Update: 2019-04-10 22:24 IST

ಹೊಸದಿಲ್ಲಿ, ಎ.10: “ಕಳೆದ ಐದು ವರ್ಷಗಳಲ್ಲಿ ನಾನು ಭ್ರಷ್ಟರನ್ನು ಜೈಲಿನ ಬಾಗಿಲುಗಳ ತನಕ ತಂದಿದ್ದೇನೆ, ನೀವು ನನಗೆ ಇನ್ನೂ ಐದು ವರ್ಷ ನೀಡಿದರೆ ಅವರನ್ನು ಒಳಗೆ ಅಟ್ಟಲಾಗುವುದು” ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಜುನಾಘರ್ ಎಂಬಲ್ಲಿ ಇಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿದ ಪ್ರಧಾನಿ ಅದು ಅಪರಾಧಿಗಳನ್ನು ಜೈಲಿಗಟ್ಟುವ ಬದಲು ಅವರನ್ನು ಹೊರತರುವತ್ತ ಹೆಚ್ಚಿನ ಗಮನ ನೀಡಿದೆ ಎಂದು ಆರೋಪಿಸಿದ್ದಾರೆ.

“ಹಗರಣಗಳ ಬಗ್ಗೆ ಹೇಳುವುದಾದರೆ ಕಾಂಗ್ರೆಸ್ ಹಲವು ಹೆಸರುಗಳನ್ನು ಹೊಂದಿದೆ. ಅದಕ್ಕೀಗ ಹೊಸ ಹೆಸರು ಪುರಾವೆಯೊಂದಿಗೆ ದೊರೆತಿದೆ. ಕಾಂಗ್ರೆಸ್ ಪಕ್ಷ ತುಘ್ಲಕ್ ರೋಡ್ ಚುನಾವಿ ಘೋಟಾಲದಲ್ಲಿ (ತುಘ್ಲಕ್ ರಸ್ತೆ ಚುನಾವಣಾ ಹಗರಣ) ತೊಡಗಿದೆ, ಬಡವರಿಗೆಂದು ಮೀಸಲಾದ ಹಣವನ್ನು ತನ್ನದೇ ನಾಯಕರಿಗೆ ಬಳಸುತ್ತಿದೆ'' ಎಂದು ಪ್ರಧಾನಿ ಹೇಳಿದರು.

“ಕರ್ನಾಟಕದ ನಂತರ ಮಧ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಬಿಟ್ಟಿದೆ. ರಾಜಸ್ಥಾನ ಮತ್ತು ಛತ್ತೀಸಗಢದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜನರನ್ನು ಲೂಟಿಗೈಯ್ಯಲು ಮಾತ್ರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಆಸಕ್ತವಾಗಿದೆ'' ಎಂದು ಪ್ರಧಾನಿ ವಿಪಕ್ಷವನ್ನು  ಲೇವಡಿಗೈದರು.

ಕಾಶ್ಮೀರದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವನ್ನು ದೂರಿದ ಪ್ರಧಾನಿ, “ಮೋದಿ ಹಠಾವೋ ಎಂಬ ಒಂದೇ ಪದ ಕಾಂಗ್ರೆಸ್ ಟೇಪ್ ರೆಕಾರ್ಡರಿನಲ್ಲಿ ಕೇಳಿ ಬರುತ್ತಿದೆ. ಸರ್ದಾರ್ ಪಟೇಲ್ ಬೆಳೆಸಿದ ಅದೇ ಕಾಂಗ್ರೆಸ್ ಇದಾಗಿದೆ. ಅವರಲ್ಲದೇ ಹೋಗಿದ್ದರೆ ಭಾರತಕ್ಕೆ ಕಾಶ್ಮೀರ ಕೂಡ ಇರುತ್ತಿರಲಿಲ್ಲ'' ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News