ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿ ಆರೋಪ ಸಾಬೀತು
ಉಡುಪಿ, ಎ.10: ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬುದ್ದಿ ಮಾಂಧ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಪೋಕ್ಸೋ ಆರೋಪಿ ಯನ್ನು ದೋಷಿ ಎಂಬುದಾಗಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಎ.12ರಂದು ಪ್ರಕಟಿಸಲಿದೆ.
ಉಡುಪಿ ಪೆರಂಪಳ್ಳಿಯ ಅರುಣ್ ಆಚಾರಿ (32) ಪ್ರಕರಣ ಆರೋಪಿಯಾಗಿದ್ದು, ಮರದ ಕೆಲಸ ಮಾಡುತ್ತಿದ್ದ ಈತ ತನ್ನ ಸಹೋದ್ಯೋಗಿಯ 15 ವರ್ಷ ಪ್ರಾಯದ ಮಗಳಿಗೆ ಮದುವೆಯಾಗುವ ಆಸೆ ತೋರಿಸಿದ್ದನು. ಆ ಸಮಯದಲ್ಲಿ ಏಳನೆ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆಕೆಯನ್ನು ಅರುಣ್ ಆಚಾರಿ, 2016ರ ಜು.16ರಂದು ಬೈಕಿನಲ್ಲಿ ಅಪಹರಿಸಿ, ಮಣಿಪಾಲದ ಎರಡು ಲಾಡ್ಜ್ ಗಳಿಗೆ ಕರೆದೊಯ್ದಿದ್ದನು. ಆರೋಪಿಯ ನಡವಳಿಕೆಯಿಂದ ಅನುಮಾನಗೊಂಡ ಲಾಡ್ಜ್‌ನ ಸಿಬ್ಬಂದಿ ಅರುಣ್ ಆಚಾರಿಗೆ ರೂಮ್ ನೀಡಲು ನಿರಾಕರಿಸಿದರು. ಬಳಿಕ ಆತ ಆಕೆ ಯನ್ನು ತನ್ನ ಪೆರಂಪಳ್ಳಿಯ ಮನೆಯಲ್ಲಿ ಯಾರು ಇಲ್ಲದನ್ನು ಅರಿತು ಅಲ್ಲಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು.
ಅದೇ ದಿನ ನೊಂದ ಬಾಲಕಿಯ ತಂದೆ ಮಣಿಪಾಲ ಠಾಣೆಯಲ್ಲಿ ಆರೋಪಿ ವಿರುದ್ಧ ನೀಡಿದ ದೂರಿನಂತೆ ಐಪಿಸಿ ಕಲಂ 366(ಎ), 376(2) ಮತ್ತು ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಅದೇ ದಿನ ಆರೋಪಿ ಯನ್ನು ಬಂಧಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಸಂಪತ್ ಕುಮಾರ್ 2016ರ ಸೆ.12ರಂದು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಮಧ್ಯೆ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅಂದಿನಿಂದ ಇಂದಿನವರೆಗೆ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಒಟ್ಟು 35 ಸಾಕ್ಷಿಗಳ ಪೈಕಿ 30 ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದರು. ವಾದ ಪ್ರತಿವಾದ ಆಲಿಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆತನನ್ನು ದೋಷಿ ಎಂಬುದಾಗಿ ತೀರ್ಪು ನೀಡಿದರು.
ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ಎ.12ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಇದೇ ಸಂದರ್ಭದಲ್ಲಿ ತಿಳಿಸಿದರು. ಅಭಿಯೋಜನೆ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.