×
Ad

ಉಡುಪಿ: ಮರಳು ಹೋರಾಟ ಸಮಿತಿಯೊಂದಿಗೆ ಸಭೆ

Update: 2019-04-10 22:38 IST

ಉಡುಪಿ, ಎ.10: ಸಂಸದೆ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಇಂದು ನಡೆದ ಮರಳು ಹೋರಾಟ ಸಮಿತಿಯವರೊಂದಿಗಿನ ಸಭೆಯಲ್ಲಿ, ಸಮಿತಿಯ ಸದಸ್ಯರು ಯಾವುದೇ ಕಾರಣ ಕ್ಕೂ ಮತದಾನ ಬಹಿಷ್ಕಾರ ಮಾಡದಂತೆ ಮನವರಿಕೆ ಮಾಡಿ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಲಾಯಿತು.

‘ಮರಳು ಸಮಸ್ಯೆಯಿಂದ ಬಳಲುತ್ತಿರುವ ಮಂದಿ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಚುನಾವಣೆ ಮುಗಿದ ತಕ್ಷಣ ಮರಳುಗಾರಿಕೆಗೆ ಅವಕಾಶ ನೀಡುವುದಾಗಿ ಸ್ವತಃ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಿಂದ ಇದಕ್ಕೆ ಬೇಕಾದ ಅನುಮತಿ ಪಡೆಯಲಾಗಿದೆ ಎಂದು ರಘುಪತಿ ಭಟ್ ಸಭೆಯಲ್ಲಿ ವಿವರಿಸಿದರು.

ಸದ್ಯ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಆದರೆ ಎ.19ರ ನಂತರ ಮರಳುಗಾರಿಕೆಗೆ ಅವಕಾಶ ನೀಡದೇ ಇದ್ದಲ್ಲಿ ಮತ್ತೊಮ್ಮೆ ಪ್ರತಿಭಟನೆ ಮಾಡುವುದಾಗಿ ಶಾಸಕ ಕೆ.ರಘುಪತಿ ಭಟ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮರಳು ಹೋರಾಟ ಸಮಿತಿಯ ಪದಾಧಿಕಾರಿಗಳಾದ ಲೋಕೇಶ್ ಮೆಂಡನ್, ಶ್ಯಾಮ್ ಕುಂದರ್, ಭಾಸ್ಕರ ಶೆಟ್ಟಿ, ಪ್ರವೀಣ್ ಸುವರ್ಣ, ಸತ್ಯರಾಜ್ ಬಿರ್ತಿ, ಚಂದ್ರ ಪೂಜಾರಿ, ರಾಘವೇಂದ್ರ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News