×
Ad

​ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಚೌಕಿದಾರರ ಅಗತ್ಯವಿಲ್ಲ- ಬಿ.ರಮಾನಾಥ ರೈ

Update: 2019-04-10 22:43 IST

ಮಂಗಳೂರು, ಎ.10: ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಕಾವಲುಗಾರರು (ಚೌಕಿದಾರರು) ಬೇಕಾಗಿಲ್ಲ. ಚೌಕಿದಾರರು ಬೇಕಾಗಿರುವುದು ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರ ಇಂತಹ ಬಂಡವಾಳ ಶಾಹಿಗಳ ಚೌಕಿದಾರರಾಗಿದ್ದಾರೆ ಹೊರತು ಜನ ಸಾಮಾನ್ಯರ ಚೌಕಿದಾರರಲ್ಲ ಎಂದು ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ ಕಾಂಗ್ರೆಸ್ ಕಚೇರಿಯಲ್ಲಿಂದು ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಗುಜರಾತಿನಲ್ಲಿ ಏಕೆ ಇನ್ನೂ ಲೋಕಾಯುಕ್ತ ರಚನೆಯಾಗಿಲ್ಲ ?:- ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಅಧಿಕಾರದಲ್ಲಿರುವ ಗುಜರಾತಿನಲ್ಲಿ ಲೋಕಾಯುಕ್ತವನ್ನು ಇದುವರೆಗೂ ರಚನೆ ಮಾಡಿಲ್ಲ. ಗುಜರಾತಿನಲ್ಲಿ ಲೋಕಾಯಕ್ತ ರಚನೆ ಮಾಡಬೇಕು ಎಂದು ನ್ಯಾಯಾಲಯದ ಸೂಚನೆ ನೀಡಿದ ಬಳಿಕವೂ ಲೋಕಾಯುಕ್ತ ರಚನೆಯಾಗಿಲ್ಲ. ದೇಶದಲ್ಲಿ ಲೋಕಪಾಲರ ನೇಮಕ ಮಾಡಬೇಕು ಎನ್ನುವ ಬಗ್ಗೆ ಆಗ್ರಹವಿದ್ದರೂ ಲೋಕಪಾಲ ನೇಮಕವನ್ನು ಮುಂದೂಡುತ್ತಾ ಬರಲಾಗುತ್ತಿತ್ತು. ಅಂತಿಮವಾಗಿ ನ್ಯಾಯಾಲಯದ ಮಧ್ಯಪ್ರವೇಶ ಬಳಿಕ ಮಾತ್ರ ಲೋಕಪಾಲರ ನೇಮಕವಾಯಿತು ಎಂದು ಬಿ.ರಮಾನಾಥ ರೈ ತಿಳಿಸಿದ್ದಾರೆ.

ದೇಶದ ಬೃಹತ್ ಉದ್ಯಮಿಗಳ 3ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿರುವುದು ಮೋದಿ ಸರಕಾರದ ಸಾಧನೆಯಾಗಿದೆ. ಕಾಂಗ್ರೆಸ್ 72,000 ಕೋಟಿರೂ ರೈತರ ಸಾಲ ಮನ್ನಾ ಮಾಡಿದೆ ಇದು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಸರಕಾರದ ನಡುವಿನ ವ್ಯತ್ಯಾಸ. ಬಡವರಿಗೆ ಸಹಾಯವಾಗಲಿ ಎಂದು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಲಾಯಿತು. ಆದರೆ ಬಿಜೆಪಿ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಲಾಭದಲ್ಲಿದ್ದ ವಿಜಯ ಬ್ಯಾಂಕನ್ನು ಗುಜರಾತಿನ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಮಾಡಿದೆ. ಈ ಆರೋಪವನ್ನು ಕಾಂಗ್ರೆಸ್‌ನ ಮೇಲೆ ಹಾಕಲು ಯತ್ನಿಸುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗುವಾಗ ಈ ಪ್ರಸ್ತಾಪ ಇತ್ತು ಎನ್ನುವ ಸಂಸದರು ಏಕೆ ವಿರೋಧಿಸಿಲ್ಲ. ಆಗಲೂ ಇಲ್ಲಿ ಸಂಸದರೂ ಅವರೇ ಆಗಿದ್ದರು. ಅವರಿಗೆ ವಿರೊಧಿಸಬಹುದಿತ್ತಲ್ಲ ಎಂದು ರಮಾನಾಥ ರೈ ತಿರುಗೇಟು ನೀಡಿದ್ದಾರೆ.

ಜಿಲ್ಲೆಯಲ್ಲಿ ಸಂಸದ ಹೆಸರು ಹೇಳಿ ಮತ ಕೇಳಲು ಬಿಜೆಪಿಗೆ ಮುಖವಿಲ್ಲ ಅದಕ್ಕಾಗಿ ಮೋದಿಯ ಹೆಸರು ಹೇಳಿ ಮತಯಾಚಿಸುತ್ತಿದ್ದಾರೆ. ಜೆಡಿಎಸ್, ಎಡಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮತ ಯಾಚಿಸು ತ್ತಿದ್ದೇವೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್,  ಬಿ.ಇಬ್ರಾಹೀಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸದಸ್ಯ ಕಣಚೂರು ಮೋನು, ಜೆಡಿಎಸ್ ಮುಖಂಡರಾದ ವಸಂತ ಪೂಜಾರಿ, ಹೈದರ್‌ ಪರ್ತಿಪ್ಪಾಡಿ, ಸುಶೀಲ್ ನರ್ಹೋನ್ನಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News