×
Ad

ಮೋದಿ ‘ಸುಪ್ರೀಂ ಲೀಡರ್’ ಎಂದ ಸಂಬಿತ್ ಪಾತ್ರ

Update: 2019-04-10 22:58 IST

ಹೊಸದಿಲ್ಲಿ, ಎ.10: ಬಿಜೆಪಿ ಅಭ್ಯರ್ಥಿಗಳು ನರೇಂದ್ರ ಮೋದಿಯವರ ಕಿರುರೂಪಗಳಾಗಿದ್ದು, ತಮ್ಮ ಹೆಸರಿನ ಬದಲಿಗೆ ಮೋದಿಯವರ ಹೆಸರಿನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಆರಂಭದಲ್ಲಿ ಕೇಳಿಬಂದಿತ್ತು. ಆದರೆ ಕೊನೆಗೆ ಬಿಜೆಪಿ ಪುರಿಯಲ್ಲಿ ಸಂಬಿತ್ ಪಾತ್ರರನ್ನು ಕಣಕ್ಕಿಳಿಸಿತು. ಈ ಬಗ್ಗೆ ಅವರ ಪ್ರತಿಸ್ಪರ್ಧಿ ಬಿಜೆಡಿಯ ಪಿನಾಕಿ ಮಿಶ್ರಾ ಮಾತನಾಡಿ, “ಬಿಜೆಪಿ ಭರವಸೆ ನೀಡಿದ್ದು ನರೇಂದ್ರ ಮೋದಿಯನ್ನು.. ಆದರೆ ನೀಡಿದ್ದು ಸಂಬಿತ್ ಪಾತ್ರರನ್ನು. ಇದು ಟ್ವಿಟರ್ ನಲ್ಲಿ ಹರಿದಾಡಿದ ಉತ್ತಮ ಜೋಕ್ ಗಳಲ್ಲಿ ಒಂದು” ಎಂದಿದ್ದರು.

ಈ ಬಗ್ಗೆ ಪತ್ರಕರ್ತರು ಸಂಬಿತ್ ಪಾತ್ರರನ್ನು ಪ್ರಶ್ನಿಸಿದಾಗ, “ಅವರ ಹೇಳಿಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ನರೇಂದ್ರ ಮೋದಿ ನಮ್ಮ ನಾಯಕ. ದೇಶದೆಲ್ಲೆಡೆಯಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು ಮೋದಿಯವರ ಕಿರುರೂಪಗಳು. ನಾವು ನಮ್ಮ ಹೆಸರುಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ನಾವು ನಮ್ಮ ‘ಸುಪ್ರೀಂ ಲೀಡರ್’ ನರೇಂದ್ರ ಮೋದಿಯವರ ಹೆಸರಿನೊಂದಿಗೆ ಸ್ಪರ್ಧಿಸುತ್ತಿದ್ದೇವೆ” ಎಂದರು.

ಸಂಬಿತ್ ಪಾತ್ರರ ಈ ಹೇಳಿಕೆಗೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

“ಸಂಬಿತ್ ಪಾತ್ರರ ಹೇಳಿಕೆ ಕೇಳಿ ನಾನು ಈಗಾಗಲೇ ಹಲವು ಕಿಮ್ ಜಾಂಗ್ ಉನ್ ರನ್ನು ಕಲ್ಪಿಸಿಕೊಳ್ಳುತ್ತಿದ್ದೇನೆ” ಎಂದು ವಿನೀತ್ ಎಂಬವರು ಟ್ವೀಟ್ ಮಾಡಿದ್ದರೆ, “ಸುಪ್ರೀಂ ಲೀಡರ್ ಎಂದರೇನು? ನಾವು ಉತ್ತರ ಕೊರಿಯಾದಲ್ಲಿ ಇದ್ದೇವೆಯೇ?” ಎಂದು ಸೈಯದ್ ಇಕ್ರಾಮುದ್ದೀನ್ ಟ್ವೀಟ್ ಮಾಡಿದ್ದಾರೆ.

“ತಡವಾಗುವುದಕ್ಕೆ ಮೊದಲು ಪ್ರಜಾಪ್ರಭುತ್ವವನ್ನು ಉಳಿಸಿ’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News