ಅನುಮತಿ ಇಲ್ಲದೆ ಗೂಗಲ್ ಪೇ ಕಾರ್ಯಾಚರಣೆ: ಮನವಿ ಪ್ರತಿಪಾದನೆ ಆರ್‌ಬಿಐಗೆ ದಿಲ್ಲಿ ಹೈಕೋರ್ಟ್ ನೋಟಿಸ್
ಹೊಸದಿಲ್ಲಿ, ಎ. 10: ಗೂಗಲ್‌ನ ಮೊಬೈಲ್ ಪಾವತಿ ಆ್ಯಪ್ ‘ಜಿ ಪೇ’ ಅನುಮತಿ ರಹಿತವಾಗಿ ಕಾರ್ಯಾಚರಿಸುತ್ತಿದೆ ಎಂದು ಪ್ರತಿಪಾದಿಸಿ ಸಲ್ಲಿಸಲಾದ ಮನವಿಯ ಆಧಾರದ ಮೇಲೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ನೋಟಿಸು ಜಾರಿ ಮಾಡಿದೆ.
ಹಣಕಾಸು ವಹಿವಾಟಿಗೆ ಅನುಕೂಲವಾಗಿರುವ ಈ ಮೊಬೈಲ್ ಅಪ್ಲಿಕೇಶನ್ ಪಾವತಿ ಹಾಗೂ ಸಂದಾಯ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ದೂರುದಾರರು ನ್ಯಾಯಾಲಯದಲ್ಲಿ ಹೇಳಿದರು. ಮಾರ್ಚ್ 20ರಂದು ಬಿಡುಗಡೆಗೊಳಿಸಲಾದ ಆರ್‌ಬಿಐಯ ಅನುಮತಿ ನೀಡಲಾದ ‘ಪಾವತಿ ವ್ಯವಸ್ಥೆ ನಿರ್ವಾಹಕರು’ ಪಟ್ಟಿಯಲ್ಲಿ ಈ ಸೇವೆ ಒಳಗೊಂಡಿಲ್ಲ ಎಂದು ದೂರುದಾರ ಅಭಿಜಿತ್ ಮಿಶ್ರಾ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ಎ.ಜೆ. ಭಂಭಾನಿ ಅವರನ್ನು ಒಳಗೊಂಡ ಪೀಠ, ದೂರಿಗೆ ಪ್ರತಿಕ್ರಿಯೆ ನೀಡುವಂತೆ ಬ್ಯಾಂಕ್ ಹಾಗೂ ಗೂಗಲ್‌ಗೆ ಸೂಚಿಸಿತು.
ಭಾರತದ ಆರ್ಥಿಕತೆ, ಬ್ಯಾಂಕಿಂಗ್ ವ್ಯವಸ್ಥೆಯ ಯೋಗಕ್ಷೇಮ ಹಾಗೂ ಆ್ಯಪ್ ಬಳಕೆದಾರರ ಖಾಸಗಿತನದ ಬಗ್ಗೆ ತನಗೆ ಕಳವಳ ಇದೆ ಎಂದು ಮಿಶ್ರಾ ನ್ಯಾಯಾಲಯಕ್ಕೆ ಹೇಳಿದ್ದಾರೆ. ಈ ಆ್ಯಪ್ ಆಧಾರ್, ಪಾನ್‌ನಂತೆ ವೈಯುಕ್ತಿಕ ಮಾಹಿತಿಯನ್ನು ನಿಗಾ ವಹಿಸದೆ ಅನಧಿಕೃತವಾಗಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಅಭಿಜಿತ್ ಮಿಶ್ರಾ ನ್ಯಾಯಾಲಯದಲ್ಲಿ ಹೇಳಿದ್ದಾರೆ.