ಮಾನಹಾನಿಕರ ಹೇಳಿಕೆ: ತೆಲಂಗಾಣ ಮುಖ್ಯಮಂತ್ರಿಗೆ ಚು. ಆಯೋಗ ನೋಟಿಸ್

Update: 2019-04-10 17:34 GMT

ಹೊಸದಿಲ್ಲಿ, ಎ. 10: ಕಳೆದ ತಿಂಗಳು ಕರೀಮ್ ‌ನಗರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿರುವಾಗ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸು ಜಾರಿ ಮಾಡಿದೆ.

 ಎಪ್ರಿಲ್ 12ರ ಸಂಜೆಯ ಒಳಗೆ ಪ್ರತಿಕ್ರಿಯೆ ಸಲ್ಲಿಸಬೇಕು. ಇಲ್ಲವಾದಲ್ಲಿ ಯಾವುದೇ ರೀತಿಯ ಮಾಹಿತಿ ನೀಡದೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ನೋಟಿಸಿನಲ್ಲಿ ಹೇಳಿದೆ. ಮಾರ್ಚ್ 17ರಂದು ಕರೀಮ್‌ನಗರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಮತ ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಕೆ. ಚಂದ್ರಶೇಖರ ರಾವ್ ವಿರುದ್ಧ ವಿಎಚ್‌ಪಿಯ ರಾಜ್ಯಾಧ್ಯಕ್ಷ ಎಂ. ರಾಮ ರಾಜು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ರಾವ್ ಅವರ ಹೇಳಿಕೆ ಸಾಮರಸ್ಯ ಕದಡುವ, ಸಾಮಾಜಿಕ ಹಾಗೂ ಧಾರ್ಮಿಕ ಸಮುದಾಯಗಳ ನಡುವೆ ಅಸ್ತಿತ್ವದಲ್ಲಿರುವ ಭಿನ್ನತೆ ಉಲ್ಬಣಗೊಳಿಸುವ, ಕೋಮು ಭಾವನೆ ಉತ್ತೇಜಿಸುವ ಸಂಭಾವ್ಯತೆ ಇದೆ. ಅಲ್ಲದೆ ಇದು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಚುನಾವಣಾ ಆಯೋಗದ ನೋಟಿಸು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News