×
Ad

ಮಹಾರಾಷ್ಟ್ರದಲ್ಲಿ ದಂಡ ತಪ್ಪಿಸಿಕೊಳ್ಳಲು ಗರ್ಭಕೋಶ ತೆಗೆಸುತ್ತಿರುವ ಮಹಿಳೆಯರು

Update: 2019-04-10 23:06 IST

ಮುಂಬೈ, ಎ. 10: ಋತುಚಕ್ರದ ಕಾರಣದಿಂದ ದಂಡ ಪಾವತಿಗೆ ಒಳಗಾಗುವುದನ್ನು ತಪ್ಪಿಸಲು ಬೀಡ್ ಜಿಲ್ಲೆಯಲ್ಲಿ ಕಬ್ಬು ಕಟಾವು ಮಾಡುವ ಮಹಿಳೆಯರು ಗರ್ಭ ಕೋಶ ತೆಗೆಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸುದ್ದಿಯೊಂದು ಪ್ರಸಾರವಾದ ಬಳಿಕ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ಬುಧವಾರ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗೆ ನೋಟಿಸು ಜಾರಿ ಮಾಡಿದೆ.

ಈ ಮಹಿಳೆಯರ ಪರಿಸ್ಥಿತಿ ಕರುಣಾಜನಕ ಹಾಗೂ ಶೋಚನೀಯ ಎಂದು ಆಯೋಗ ಹೇಳಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತೀವ್ರ ಕಳವಳ ಉಂಟಾಗಿದೆ ಎಂದು ಆಯೋಗ ಹೇಳಿದೆ. ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹಾಗೂ ಇನ್ನು ಮುಂದೆ ಇಂತಹ ದೌರ್ಜನ್ಯಗಳು ನಡೆಯದಂತೆ ಖಾತರಿ ನೀಡುವಂತೆ ಆಯೋಗ ಮುಖ್ಯಕಾರ್ಯದರ್ಶಿ ಯುಪಿಎಸ್ ಮದನ್ ಅವರಿಗೆ ಸೂಚಿಸಿದೆ.

ಬೀಡ್ ಜಿಲ್ಲೆಯಲ್ಲಿ ಮೂರ್ನಾಲ್ಕು ಮಕ್ಕಳ ಬಳಿಕ ಮಹಿಳೆಯರು ಗರ್ಭಕೋಶ ತೆಗೆಸುತ್ತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಋತುಚಕ್ರ ಕೆಲಸಕ್ಕೆ ಅಡಚಣೆಯಾಗುತ್ತಿರುವುದು ಹಾಗೂ ದಂಡ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ. ಗರ್ಭಕೋಶ ತೆಗೆಸಿಕೊಳ್ಳುತ್ತಿರುವ ಹೆಚ್ಚಿನ ಮಹಿಳೆಯರು ಬಿದಿರು ಕಟಾವು ಮಾಡುವವರು ಹಾಗೂ ಪಶ್ಚಿಮ ಮಹಾರಾಷ್ಟ್ರ ಕಬ್ಬು ಬೆಳೆಯುವ ವಲಯದಿಂದ ಅಕ್ಟೋಬರ್ ಹಾಗೂ ಮಾರ್ಚ್ ನಡುವೆ ವಲಸೆ ಬರುವವರು. ಪತಿ ಹಾಗೂ ಪತ್ನಿಯನ್ನು ಒಂದು ಘಟಕವಾಗಿ ಪರಿಗಣಿಸುವ ಗುತ್ತಿಗೆದಾರರು ಗುತ್ತಿಗೆಗೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ದಂಪತಿಯಲ್ಲಿ ಯಾರಾದರೊಬ್ಬರು ರಜೆ ತೆಗೆದುಕೊಂಡರೂ ದಿನವೊಂದಕ್ಕೆ 500 ರೂಪಾಯಿ ದಂಡವನ್ನು ಗುತ್ತಿಗೆಗಾರನಿಗೆ ಪಾವತಿಸಬೇಕು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News