×
Ad

ಹೊಸಪೇಟೆ ಬಿಜೆಪಿ ಮುಖಂಡನಿಂದ ಅಪ್ರಾಪ್ತೆಯ ಅತ್ಯಾಚಾರ: ಆರೋಪ

Update: 2019-04-10 23:07 IST

ಮಂಗಳೂರು/ಹೊಸಪೇಟೆ, ಎ.10: ಹಣದ ಆಮಿಷವೊಡ್ಡಿ ಅಪ್ರಾಪ್ತೆಯನ್ನು ಅತ್ಯಾಚಾರಗೈದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ಆರೋಪಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ನಿವಾಸಿ, ತಾಪಂ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೇವರಮನೆ ಚಂದ್ರಶೇಖರಪ್ಪ (50) ತಲೆಮರೆಸಿಕೊಂಡ ಆರೋಪಿ.

ಸಂತ್ರಸ್ತೆಯ ತಂದೆ-ತಾಯಿ ಬಡವರಾಗಿದ್ದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಅಪ್ರಾಪ್ತೆಯು ತನ್ನ ಅಜ್ಜಿಯ ಊರಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಬಾಲಕಿಯು ಅಜ್ಜಿಯ ಹೋಟೆಲ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಳು. ಆರೋಪಿ ದೇವರಮನೆ ಚಂದ್ರಶೇಖರಪ್ಪ ಹೋಟೆಲ್‌ಗೆ ಚಹಾ ಕುಡಿಯಲೆಂದು ಆಗಾಗ ಬರುತ್ತಿದ್ದನು. ಬಾಲಕಿಗೆ ಆರೋಪಿಯು 20, 50 ರೂ. ಹೀಗೆ ಆಗಾಗ ಹಣ ನೀಡಿ ಆಮಿಷವೊಡ್ಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುಮಾರು ಆರು ತಿಂಗಳ ಹಿಂದೆ ಆರೋಪಿಯು ತನ್ನ ಮನೆಯೊಳಗೆ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಈ ಕೃತ್ಯವನ್ನು ಆರೋಪಿ ಹಲವು ದಿನಗಳ ಕಾಲ ಮುಂದುವರಿಸಿದ್ದಾನೆ. ಈ ವಿಷಯವನ್ನು ಯಾರ ಮುಂದೆಯೂ ಬಾಯಿ ಬಿಡಬಾರದು. ಬಾಯಿಬಿಟ್ಟದ್ದೇ ಆದಲ್ಲಿ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಸಂತ್ರಸ್ತೆ ಬಾಲಕಿಯು ಹೊಟ್ಟೆನೋವೆಂದು ತಾಯಿಯ ಬಳಿ ಅವಲತ್ತುಕೊಂಡಿದ್ದಾಳೆ. ಆಕೆಯನ್ನು ಹೊಸಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಆರೋಪಿ ಬಂಧನವಾಗಿಲ್ಲ: ಆರೋಪಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನಾಗಿದ್ದು, ರಾಜಕೀಯ ಪ್ರಭಾವ ಬಳಸಿ ಪ್ರಕರಣದಿಂದ ಹಿಂದೆ ಸರಿಯಲು ಯತ್ನಿಸುತ್ತಿದ್ದಾನೆ. ಸದ್ಯ ಆತ ಗ್ರಾಮದಿಂದ ಪರಾರಿಯಾಗಿದ್ದಾನೆ. ಪೊಲೀಸರು ಇಲ್ಲಿಯವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪೋಷಕರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಗಾಗಿ ತಂಡವೊಂದನ್ನು ರಚಿಸಲಾಗಿದೆ. ಆರೋಪಿ ಯಾವುದೇ ರಾಜಕೀಯ ಪಕ್ಷದ ಮುಖಂಡನಾಗಿದ್ದರೂ ಆತನನ್ನು ಬಂಧಿಸುತ್ತೇವೆ. ಆರೋಪಿಯ ಸುಳಿವು ಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು.
- ಪರಸಪ್ಪ, ಪೊಲೀಸ್ ಇನ್‌ಸ್ಪೆಕ್ಟರ್,
ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆ

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನಿಂದ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಂತ್ರಸ್ತೆಗೆ ನ್ಯಾಯ ದೊರಕಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು.
- ಮುಹಮ್ಮದ್ ಗೌಸ್,
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News