×
Ad

ಕಾಂಗ್ರೆಸ್ ಗೆ ಮತದಾರರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ : ಹಾರಿಸ್ ಬೈಕಂಪಾಡಿ

Update: 2019-04-11 20:27 IST

ಮಂಗಳೂರು, ಎ.11: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಮಂಗಳೂರು ಉತ್ತರ ವಿಧಾನ ಕ್ಷೇತ್ರ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷ ಹಾರಿಸ್ ಬೈಕಂಪಾಡಿ ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೊಯ್ದಿನ್ ಬಾವಾ 72,000 ಮತ ಪಡೆದಿದ್ದು, ಈ ಬಾರಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಕ್ಕೆ 5 ಸಾವಿರಕ್ಕೂ ಅಧಿಕ ಲೀಡ್ ಕೊಡಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಲಾಗುತ್ತಿದೆ ಎಂದರು.

ಈಗಾಗಲೆ ನಾವು ಒಂದು ಸುತ್ತಿನ ಮನೆ ಮನೆ ಭೇಟಿ ಕಾರ್ಯ ಮುಗಿಸಿದ್ದೇವೆ. ರಾಜ್ಯ ಸರಕಾರದ ಸಾಧನೆ ಮತ್ತು ಕೇಂದ್ರ ಸರಕಾರ ಹಾಗೂ ನಳಿನ್ ಕುಮಾರ್ ಕಟೀಲ್‌ರ ವೈಫಲ್ಯಗಳ ನ್ನು ಮತದಾರರ ಮುಂದಿಟ್ಟಿದ್ದೇವೆ. ಭಾವನಾತ್ಮಕ ವಿಚಾರಕ್ಕಿಂತ ಅಭಿವೃದ್ಧಿ ವಿಚಾರ ಪರಿಗಣಿಸುವಂತೆ ಮನವಿ ಮಾಡಿದ್ದೇವೆ. ಎಲ್ಲಾ ಕಡೆಯೂ ಬಿಜೆಪಿ ಮತ್ತು ಸಂಸದರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂದರು.

ಮಾಜಿ ಶಾಸಕ ಮೊಯ್ದಿನ್ ಬಾವಾ ಸಹಿತ ಹಿರಿಯ ಕಾಂಗ್ರೆಸ್ ಮುಖಂಡರು ಅಲ್ಲಲ್ಲಿ ಕಾರ್ನರ್ ಮೀಟಿಂಗ್ ನಡೆಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಕೂಡ ಕ್ಷೇತ್ರ ವ್ಯಾಪ್ತಿ ಪ್ರಚಾರ ಆರಂಭಿಸಿದ್ದಾರೆ. ಎ.14ರಂದು ಕ್ಷೇತ್ರದಲ್ಲಿ  ಬೃಹತ್ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಈ ಕ್ಷೇತ್ರ ವ್ಯಾಪ್ತಿಯ ಎಸ್‌ಇಝಡ್, ಎಂಆರ್‌ಪಿಎಲ್ ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿಫಲವಾದುದನ್ನು ಸ್ಥಳೀಯರು ಮನಗಂಡಿದ್ದು, ಸಂಸದನಾಗಿ ಆಯ್ಕೆಯಾದರೆ ಈ ಅನ್ಯಾಯವನ್ನು ಸರಿಪಡಿಸುವ ಭರವಸೆಯನ್ನು ಮಿಥುನ್ ರೈ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದರು.

 ಕಳೆದ 10 ವರ್ಷದಲ್ಲಿ ಸಂಸದನಾಗಿರುವ ನಳಿನ್ ಕುಮಾರ್ ಕಟೀಲ್ ಈ ಭಾಗದ ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ನೀಡಿದ ಭರವಸೆಯನ್ನೂ ಈಡೇರಿಸಿಲ್ಲ. ಇದು ಮುಸ್ಲಿಮರ ಅತೃಪ್ತಿಗೆ ಕಾರಣವಾಗಿದೆ ಎಂದ ಹಾರಿಸ್ ಬೈಕಂಪಾಡಿ, ದ.ಕ.ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗದ ಅಸಮಾಧಾನ ಮುಸ್ಲಿಮರಿಗಿದ್ದರೂ ಕೂಡ ಓರ್ವ ಯುವ ಉತ್ಸಾಹಿ ಅಭ್ಯರ್ಥಿಗೆ ಟಿಕೆಟ್ ನೀಡಿರುವುದರಿಂದ ಆ ಅಸಮಾಧಾನ ದೂರವಾಗಿದೆ. ಈ ಬಾರಿ  ಮಿಥುನ್ ರೈಯನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಸೋಲಿನ ರುಚಿ ತೋರಿಸಬೇಕು ಎಂದು ಜನತೆ ನಿರ್ಧರಿಸಿದ್ದಾರೆ. ಅದು ಕೂಡ ಕಾಂಗ್ರೆಸ್‌ನ ಬಲ ಹೆಚ್ಚಿಸಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News