ಕುಂದಾಪುರ: ಬಿಜೆಪಿ ಉಚ್ಛಾಟಿತರ ಪಾಳಯದಲ್ಲಿ ‘ತೆನೆ ಹೊತ್ತ ಮಹಿಳೆ’

Update: 2019-04-11 15:56 GMT

 ಕುಂದಾಪುರ, ಎ.11: ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಕೆಲ ಸಮಯದ ಹಿಂದೆ ಬಿಜೆಪಿಯಿಂದ ಉಚ್ಚಾಟಿತರಾದವರೊಂದಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಇಂದು ಕಾಣಿಸಿಕೊಳ್ಳುವ ಮೂಲಕ ಎದುರಾಳಿ ಪಾಳೆಯಲ್ಲಿ ಕಳವಳ ಮೂಡಿಸಿದ್ದಾರೆ.

ಕುಂದಾಪುರದಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ ಕಾವೇರಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪರ್ಧಿಸಿದ್ದಾಗ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಿಶೋರ್ ಕುಮಾರ್ ಅವರ ಕುಂದಾಪುರದ ಕಲಾಕ್ಷೇತ್ರದ ಕಚೇರಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಪ್ರಮೋದ್ ಮಧ್ವರಾಜ್ ತನಗೆ ಮತ ನೀಡುವಂತೆ ಮನವಿ ಮಾಡಿದರು.

ಕುಂದಾಪುರದಲ್ಲಿ ಬಿಜೆಪಿ ಪ್ರಮುಖರಾಗಿದ್ದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಸರ್ವೋತ್ತಮ ಹೆಗ್ಡೆ, ಮೇರ್ಡಿ ಸತೀಶ್ ಶೆಟ್ಟಿ ಸೇರಿದಂತೆ ಹಲವರ ಗುಂಪೊಂದು, ಒಂದೊಮ್ಮೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಕ್ಷಕ್ಕೆ ಮರು ಸೇರ್ಪಡೆಯನ್ನು ಬಯಸಿದಾಗ ಅದನ್ನು ತೀವ್ರವಾಗಿ ವಿರೋಧಿಸಿದ್ದರು.

ಇದರಿಂದ ಕುಂದಾಪುರ ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಯಾಗಿತ್ತು. ಇವರು ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಕದತಟ್ಟಿದ ಜಯಪ್ರಕಾಶ್ ಹೆಗ್ಡೆಗೆ ರತ್ನಗಂಬಳಿ ಸ್ವಾಗತ ನೀಡಿದ್ದರು. ಇವರ ಭಿನ್ನಮತ ಪರಾಕಾಷ್ಟೆಯನ್ನು ತಲುಪಿದ್ದು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ. ಕುಂದಾಪುರದಲ್ಲಿ ನಡೆದ ಯಡಿಯೂರಪ್ಪರ ಸಮಾರಂದಲ್ಲಿ ಇವರು ಹಾಲಾಡಿ ವಿರೋಧಿ ಭಿತ್ತಿ ಪತ್ರ ಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿ ಹಾಲಾಡಿ ಅವರ ಮರುಸೇರ್ಪಡೆಯನ್ನು ಸಾರ್ವಜನಿಕವಾಗಿಯೇ ವಿರೋಧಿಸಿದ್ದರು.

ಆದರೆ ಇಲ್ಲಿ ಹಾಲಾಡಿ ಪರ ಬ್ಯಾಟ್ ಬೀಸಿದ ಯಡ್ಡಿ, ಅವರ ವಿರೋಧಿ ಬಣಕ್ಕೆ ಹೊರ ಹೋಗುವಂತೆ ಸಾರ್ವಜನಿಕವಾಗಿಯೇ ಜಾಡಿಸಿದ್ದರು. ಅನಂತರ ಬೂದಿಮುಚ್ಚಿದ ಕೆಂಡದಂತಿದ್ದ ಭಿನ್ನಮತ ಕುಂದಾಪುರ ಪುರಸಭಾ ಚುನಾವಣೆ ಸಂದರ್ಭದಲ್ಲಿ ಭುಗಿಲೆದ್ದು, ಬಿಜೆಪಿಯ ಮೋಹನ್ ಶೆಣೈ ಎದುರು ಬಂಡಾಯ ವಾಗಿ ಸ್ಫರ್ಧಿಸಿದ ರಾಜೇಶ್ ಕಾವೇರಿ ಅವರನ್ನು ಪಕ್ಷದಿಂದ ಹೊರಹಾಕ ಲಾಯಿತು.

ಇದೀಗ ಈ ಪಾಳಯಕ್ಕೆ ನುಗ್ಗಿದ ಪ್ರಮೋದ್‌ರನ್ನು ಸ್ವಾಗತಿಸಿದ ಕಿಶೋರ್ ಕುಮಾರ್ ಮತ್ತು ರಾಜೇಶ್ ಕಾವೇರಿ, ನಾವೆಲ್ಲರೂ ಅಸಲಿಗೆ ಈಗಲೂ ಬಿಜೆಪಿ ಯವರೇ. ಕೇಂದ್ರದಲ್ಲಿ ನಮಗೆ ಮೋದಿ ಬೇಕೆ ಬೇಕು. ಆದರೆ ಸ್ಥಳೀಯವಾಗಿ ಕ್ಷೇತ್ರವನ್ನು ಅಭಿವೃದ್ಧಿಗೆ ಕೊಂಡೊಯ್ಯಬೇಕಾದ ನಿಮ್ಮಂಥಹ ಅಭ್ಯರ್ಥಿ ಬೇಕು. ಹೀಗಾಗಿ ನಿಮಗೆ ನಮ್ಮ ಮತ ಎಂದು ಖುಲ್ಲಂ ಖುಲ್ಲಾ ಆಶ್ವಾಸನೆ ನೀಡಿ ಬಿಟ್ಟರು. ಇವರ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಮುಂದುವರಿದ ಭಾಗದಂತಿತ್ತು.

ಇಂದು ರಾಜೇಶ್ ಕಾವೇರಿ ಹಾಗೂ ಕಿಶೋರ್‌ಕುಮಾರ್ ಅವರೊಂದಿಗೆ ಹಿಂದೆ ಬಿಜೆಪಿ ಭಿನ್ನಮತದ ಮಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಮೇರ್ಡಿ ಸತೀಶ್ ಶೆಟ್ಟಿ ಹಾಗೂ ಕೊಟೇಶ್ವರ ಗ್ರಾಪಂನ ಬಿಜೆಪಿ ಉಚ್ಛಾಟಿತ ಅಧ್ಯಕ್ಷೆ ಜಾನಕಿ ಬಿಲ್ಲವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News