ಪ್ರಧಾನಿ ಮುಂದೆ ಅಹವಾಲು ಮಂಡಿಸಲು ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಐವನ್ ಆಗ್ರಹ
ಮಂಗಳೂರು, ಎ.11: ಚುನಾವಣಾ ಪ್ರಚಾರಕ್ಕಾಗಿ ಎ.13ರಂದು ಮಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯ ಮುಂದೆ ವಿಜಯಾ ಬ್ಯಾಂಕ್ ವಿಲೀನಕ್ಕೆ ಸಂಬಂಧಿಸಿ ಅಹವಾಲು ಮಂಡಿಸಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯಾ ಬ್ಯಾಂಕ್ ವಿಲೀನಗೊಳಿಸಿ ಜಿಲ್ಲೆಯ ಜನತೆಗೆ ಅವಮಾನ ಮಾಡಿದ್ದೀರಿ. ಈ ಬಗ್ಗೆ ಜನತೆಗೆ ತೀವ್ರ ಆಕ್ರೋಶ ಇದೆ. ಅದಕ್ಕಾಗಿ ಪ್ರಧಾನಿಯ ಜೊತೆ ಮಾತನಾಡಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಹಂಪನಕಟ್ಟೆ ವೃತ್ತದ ಬಳಿ ‘ಗೋಬ್ಯಾಕ್ ಮೋದಿ’ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ರೇಲ್ ವಿಚಾರದಲ್ಲಿ ಕಾಂಗ್ರೆಸ್ ವಾದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನೀಡಿದ ತೀರ್ಪು ಬಲ ನೀಡಿದೆ. ಕಳವಾದ ದಾಖಲೆಗಳೂ ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಮುಂದೆ ವಿಚಾರಣೆ ನಡೆದಾಗ ಚೌಕಿದಾರನ ಬಂಡವಾಳ ಬಯಲಾಗಲಿದೆ. ಅನಿಲ್ ಅಂಬಾನಿಗೆ ನೆರವಾಗಲು ಭಷ್ಟಾಚಾರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಐವನ್ ಡಿಸೋಜ ಆರೋಪಿಸಿದರು.
ದೇಶದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲಾಗುತ್ತಿದೆ. ಅಲೆಯೂ ಇಲ್ಲ, ಬಲೆಯೂ ಇಲ್ಲ. ಈ ಬಾರಿ ಜನ ಬಿಜೆಪಿಗೆ ವಿರುದ್ಧವಾಗಿ ತೀರ್ಪು ನೀಡಲಿದ್ದಾರೆ. ದ.ಕ.ಜಿಲ್ಲೆಯಲ್ಲಿ ಈ ಬಾರಿ ಮಿಥುನ್ ರೈ ಪರವಾದ ಒಲವು ಇದೆ. ಮನೆ ಮನೆ ಪ್ರಚಾರದ ಸಂದರ್ಭ ಬಿಜೆಪಿ ಸಂಸದರ ವಿರುದ್ಧವೇ ಜನ ಮಾತನಾಡುತ್ತಿರುವುದು ಕೇಳುತ್ತಿದೆ ಎಂದು ಐವನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್, ಬಿ.ಎ.ಮುಹಮ್ಮದ್ ಹನೀಫ್, ಅಶ್ರಫ್ ಸೇವಾದಳ, ಮುಸ್ತಫಾ ಸಿ.ಎಂ. ಮತ್ತಿತರರು ಉಪಸ್ಥಿತರಿದ್ದರು.