ಸಮಕಾಲೀನ ಘಟನೆಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಸೂಚಿಸುತ್ತಿವೆ: ಸುಪ್ರೀಂ ಕೋರ್ಟ್

Update: 2019-04-11 17:01 GMT

 ಹೊಸದಿಲ್ಲಿ,ಎ.11: ದೇಶದಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳ ವಿರುದ್ಧ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಕಲಾತ್ಮಕ ಸ್ವಾತಂತ್ರ್ಯದ ಮೇಲ ನಿರ್ಬಂಧಗಳನ್ನು ಹೇರುತ್ತಿರುವ ಬಗ್ಗೆ ಗುರುವಾರ ಕಳವಳ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಜನತೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಸರಕಾರವು ಸಂವಿಧಾನಾತ್ಮಕವಾಗಿ ಬದ್ಧವಾಗಿದೆ ಎಂದು ಹೇಳಿತು. ಇದೇ ವೇಳೆವ್ಯಂಗಾತ್ಮಕ ಚಿತ್ರ ‘ಭೋಬಿಶ್ಯೋಟೆರ್ ಭೂತ್’ನ ಬಿಡುಗಡೆಗೆ ತಡೆಯನ್ನೊಡ್ಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಸರಕಾರಕ್ಕೆ 20 ಲ.ರೂ.ಗಳ ದಂಡವನ್ನು ನ್ಯಾಯಾಲಯವು ವಿಧಿಸಿತು.

ಕಲಾವಿದರು ಸಂಪೂರ್ಣ ಸ್ವಾತಂತ್ರ್ಯ ಮತ್ತು ಟೀಕಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವರ ಕಲಾತ್ಮಕ ಸ್ವಾತಂತ್ರ್ಯವನ್ನು ಸರಕಾರಿಸಂಸ್ಥೆಗಳು ನಿರ್ಬಂಧಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಹೇಮಂತ ಗುಪ್ತಾ ಅವರ ಪೀಠವು ಹೇಳಿತು.
  ಅಧಿಕಾರದಲ್ಲಿರುವವರು ಇತರರ ನಂಬಿಕೆಯ,ಚಿಂತನೆಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ಸಂವಿಧಾನವು ಅನುಮತಿ ನೀಡುವುದಿಲ್ಲ. ಅಭಿಪ್ರಾಯಗಳ ಸಂವಹನವುಮಾನವನ ಶಾಸನಬದ್ಧ ಹಕ್ಕು ಆಗಿದೆ ಮತ್ತು ಈ ಅಭಿಪ್ರಾಯಗಳು ಯಾರನ್ನು ಉದ್ದೇಶಿಸಿವೆಯೋ ಅವರ ಸ್ವೀಕಾರಾರ್ಹತೆಯ ನಿಯಂತ್ರಣಕ್ಕೊಳಪಟ್ಟಿಲ್ಲ. ಕಲೆಯನ್ನು ಯಾವುದೇ ರೂಪದಲ್ಲಿ ಬಿಂಬಿಸುವ ಕ್ಷಮತೆಯು ಸಂವಿಧಾನಾತೀತ ಪ್ರಾಧಿಕಾರಿಯ ಅಧೀನಕ್ಕೊಳಪಟ್ಟರೆ ಮೂಲಭೂತ ಮಾನವ ಸ್ವಾತಂತ್ರ್ಯಗಳಿಗೆ ಅಸ್ಪಷ್ಟತೆ ಮತ್ತು ನಿರಂಕುಶಾಧಿಕಾರದಿಂದಕುತ್ತುಂಟಾಗುವ ಗಂಭೀರ ಅಪಾಯವಿದೆ ಎಂದು ತೀರ್ಪನ್ನು ಬರೆದ ನ್ಯಾ.ಚಂದ್ರಚೂಡ ಹೇಳಿದರು.

ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದಿರುವ ಚಿತ್ರದ ಬಿಡುಗಡೆಗೆ ಅಡ್ಡಿಯನ್ನುಂಟು ಮಾಡುವ ಮೂಲಕ ಪ.ಬಂಗಾಳ ಪೊಲೀಸರು ತಮ್ಮ ಅಧಿಕಾರವನ್ನುದುರುಪಯೋಗಿಸಿಕೊಂಡಿದ್ದಾರೆ ಎಂದು ಹೇಳಿದ ನ್ಯಾಯಾಲಯವು, ಸದ್ಯದ ಸಂಸ್ಕೃತಿಗಳನ್ನು ಟೀಕಿಸುವ ಭಾಷಣಗಳು,ಅಭಿಪ್ರಾಯಗಳ ಧ್ವನಿಯನ್ನುಡುಗಿಸಲು ಮತ್ತು ಕಾನೂನಿಗೆವಿಧೇಯ ಪ್ರಜೆಗಳನ್ನು ಮಣಿಸಲು ಬೆದರಿಕೆಯನ್ನೊಡ್ಡಲು ಪೊಲೀಸರು ಪ್ರಯತ್ನಿಸಿದ್ದರು ಎಂದು ತಿಳಿಸಿತು. ಕಲಾತ್ಮಕ ಸ್ವಾತಂತ್ರಕ್ಕೆ ಒತ್ತು ನೀಡಿದ ಅದು,ಪೊಲೀಸರು ಸಾರ್ವಜನಿಕನೈತಿಕತೆಯ ಸ್ವಘೋಷಿತ ಪಾಲಕರಾಗುವಂತಿಲ್ಲ ಎಂದು ಹೇಳಿತು.
ಚಿತ್ರ ನಿರ್ಮಾಪಕರಿಗೆ ಉಂಟಾಗಿರುವ ನಷ್ಟವನ್ನು ಭರಿಸುವಂತೆ ನ್ಯಾಯಾಲಯವು ಪಶ್ಚಿಮ ಬಂಗಾಳ ಸರಕಾರಕ್ಕೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News