ಪುತ್ತೂರು : ವಿದ್ಯುತ್ ಹರಿದು ಕಾರ್ಮಿಕ ಗಂಭೀರ ಗಾಯ
ಪುತ್ತೂರು : ಕಾಮಗಾರಿ ವೇಳೆ ವಿದ್ಯುತ್ ಹರಿದ ಪರಿಣಾಮವಾಗಿ ವಿದ್ಯುತ್ ಕಂಬವೇರಿ ತಂತಿ ಬದಲಾವಣೆ ಕೆಲಸದಲ್ಲಿ ನಿರತರಾಗಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಬಳಿ ಗುರುವಾರ ಸಂಭವಿಸಿದೆ. ಮತ್ತೋರ್ವ ಕಾರ್ಮಿಕ ಕಂಬದಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ ನಿವಾಸಿ ಮಾಣಿಕ್ಯ (24) ಗಂಭೀರ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆ ತಂತಿಯನ್ನು ತೆರವುಗೊಳಿಸಿ ಹೊಸ ತಂತಿ ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಎಚ್‍ಟಿ ಲೈನ್ ವಿದ್ಯುತ್ ಕಂಬವೇರಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಪುತ್ತೂರು ನಗರದ ಬನ್ನೂರಿನಲ್ಲಿರುವ ಮೆಸ್ಕಾಂ ಪ್ರಸರಣ ಕೇಂದ್ರದ ಅಧಿಕಾರಿಗಳು ಏಕಾಏಕಿ ಈ ಲೈನ್‍ನಲ್ಲಿ ವಿದ್ಯುತ್ ಸರಬರಾಜು ಮಾಡಿದ ಕಾರಣದಿಂದಾಗಿಯೇ ಈ ಘಟನೆ ನಡೆದಿದ್ದು, ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.