×
Ad

ಕೊಣಾಜೆ: ಗಾಳಿ ಮಳೆಗೆ ಶಾಲೆ, ಮನೆಗಳಿಗೆ ಹಾನಿ

Update: 2019-04-11 23:02 IST

ಕೊಣಾಜೆ:  ಗಾಳಿ ಮಳೆಗೆ ಹೂಹಾಕುವಕಲ್ಲು ಎಂಬಲ್ಲಿರುವ ಪ್ರಾಥಮಿಕ ಶಾಲೆ, ಪಂಚಾಯಿತಿ ಕಟ್ಟಡ ಹಾಗೂ ಸಮೀಪದ ಮನೆಗಳ ಹೆಂಚುಗಳು ಗಾಳಿಗೆ ಹಾರಿಹೋಗಿ ಅಪಾರ ಹಾನಿ ಸಂಭವಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ಗುರುವಾರ ಸಂಜೆ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿದ್ದು ಹೂಹಾಕುವ ಕಲ್ಲು ಸರ್ಕಾರಿ ಪ್ರಾಥಮಿಕ ಶಾಲೆಯ  ಒಂದು ಭಾಗದ ಹೆಂಚುಗಳು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಅಲ್ಲದೆ ಇಲ್ಲೇ ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿಯ ಹಳೆಕಟ್ಟಡದ ಹೆಂಚುಗಳು ಕೂಡಾ ಗಾಳಿಗೆ ಹಾರಿದೆ. ಗಾಳಿಗೆ ಮಳೆಗೆ ಹೂಹಾಕುವ ಕಲ್ಲಿನ ಸಂಕಪ್ಪ ಆಚಾರ್ಯ ಎಂಬವರ ಮನೆಯ ಹೆಂಚುಗಳು ಕೂಡಾ ಹಾರಿ ಹೋಗಿದ್ದು, ಇಲ್ಲೇ ಸಮೀಪದ ವಿಜಯ ಕುಮಾರ್ ಎಂಬರ ವೆಲ್ಡಿಂಗ್ ಅಂಗಡಿಯ ಮಾಡಿಗೆ ಹಾಕಲಾಗಿದ್ದ ಎಲ್ಲಾ ಸಿಮೆಂಟ್ ಶೀಟ್‍ಗಳು ಗಾಳಿಗೆ ಬಿದ್ದು ಪುಡಿಯಾಗಿದೆ. ತಿಮ್ಮಪ್ಪ ಎಂಬವರ ಶೆಡ್‍ನ ಸಿಮೆಂಟ್ ಶೀಟ್ ಹಾಗೂ ನಾರ್ಯ ಕ್ರಾಸ್ ರಸ್ತೆಯ ಬಳಿ ಪೊಲೀಸರು ವಾಹನ ತಪಾಸಣೆಗಾಗಿ ಹಾಕಿದ್ದ ತಗಡು ಶೀಟ್‍ನ ಶೆಡ್ ಕೂಡಾ ಸಂಪೂರ್ಣ ನಾಶವಾಗಿದೆ.

ಹೂಹಾಕುವ ಕಲ್ಲಿನ ಶಾಲೆಯ ಬಹುತೇಕ ಹೆಂಚುಗಳು ಗಾಳಿಗೆ ಹಾರಿ ಹೋಗಿ ಅಪಾರ ಹಾನಿ ಸಂಭವಿಸಿದ್ದು, ಶಾಲೆಯ ಮಕ್ಕಳಿಗೆ ರಜೆ ದೊರಕಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ, ಹಾನಿಗೊಂಡಿರುವ ಶಾಲೆಗೆ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ನವೀನ್ ಚಂದ್ರ, ಗೌರವಾಧ್ಯಕ್ಷರಾದ ರಾಜಗೋಪಾಲ ರೈ ಬೆಳ್ಳೇರಿ. ರಮೇಶ್ ಶೇಣವ, ಗಿರೀಶ್ ಬೆಳ್ಳೇರಿ, ಅಬೂಬಕ್ಕರ್ ತೋಟಾಲ್, ಎಸ್‍ಡಿಎಂಸಿ ಸದಸ್ಯರಾದ ಖಲಂದರ್ ಶಾಫಿ, ಚಂದ್ರಾಕ್ಷ ಮೋದಲಾವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News