×
Ad

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕೊಡವೂರು ಸರಕಾರಿ ಶಾಲಾ ಮುಖ್ಯೋಪಾಧ್ಯಾಯ ಅಮಾನತು

Update: 2019-04-12 12:27 IST

ಉಡುಪಿ, ಎ.12: ಕಾರ್ಕಳದಲ್ಲಿ ಎ. 7ರಂದು ನಡೆದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯಕ್ರಮದ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸುಂದರ್ ಅವರನ್ನು ಉಡುಪಿ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭಾಗವಹಿಸಿದ್ದ ಈ ಸಭೆಯಲ್ಲ್ಲಿ ಸುಂದರ್, ಸರ್ವೆಯಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡುವ ಬಗ್ಗೆ, ಗುತ್ತಿಗೆ ಆಧಾರದಲ್ಲಿ ದಲಿತರಿಗೆ ಅವಕಾಶ ಕಲ್ಪಿಸುವ ಬಗ್ಗೆ ಹಾಗೂ ಸ್ವ ಉದ್ಯೋಗಕ್ಕೆ ಅನುದಾನ ನೀಡುವ ಬಗ್ಗೆ ಮನವಿ ಮಾಡಿರುವುದಾಗಿ ದೂರಲಾಗಿದೆ.

ಜಿಲ್ಲೆಯಲ್ಲಿ 2019ರ ಮಾ.10ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಯಾವುದೇ ರಾಜಕೀಯ ಚುನಾವಣಾ ಪ್ರಚಾರ ಸಭೆ ಸಮಾ ರಂಭಗಳಲ್ಲಿ ಯಾವುದೇ ಸರಕಾರಿ ನೌಕರರು ಅಧಿಕೃತವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಆದುದರಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡಿ, ಪ್ರಚಾರ ಕಾರ್ಯಕೈಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಸುಂದರ್ ಅವರನ್ನು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News