ಅಲ್ಪಸಂಖ್ಯಾತರ ಮತ ಬೇಡವೆಂದಿದ್ದ ಸಂಸದನೀಗ ಅವರನ್ನು ವೇದಿಕೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ: ಯು.ಆರ್. ಸಭಾಪತಿ

Update: 2019-04-12 11:53 GMT

ಕುಮಟಾ: ಸುಳ್ಳು ಆಶ್ವಾಸನೆಗಳನ್ನು ನೀಡಿ, ದೇಶದ ಜನರನ್ನು ವಂಚನೆ ಮಾಡಿದ ಪಕ್ಷ ಬಿಜೆಪಿ. ಈ ಕ್ಷೇತ್ರದ ಸಂಸದರು ಅಲ್ಪಸಂಖ್ಯಾತರ ಮತ ಬೇಡ ಎಂದಿದ್ದರು. ಆದರೀಗ ಅವರೇ ಅಲ್ಪಸಂಖ್ಯಾತರೊಬ್ಬರನ್ನ ವೇದಿಕೆಯ ಮೇಲೆ ಕೂರಿಸಿಕೊಳ್ಳುತ್ತಿದ್ದಾರೆ ಎಂದು  ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಉಸ್ತುವಾರಿ ಯು.ಆರ್.ಸಭಾಪತಿ ವಾಗ್ದಾಳಿ ನಡೆಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಕುಮಟಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಅತಿ ಆಕರ್ಷಕವಾಗಿ ಭರವಸೆ ನೀಡಿ ವಂಚಿಸಿದ ಪಕ್ಷ ಬಿಜೆಪಿ. ಎಲ್ಲಾ ಕಾಳಧನ ಕಾಂಗ್ರೆಸ್ ಮನೆಯಲ್ಲಿ ಸೇರಿಕೊಂಡಿದೆ. ಅದನ್ನು ತರುತ್ತೇನೆ. ಅಧಿಕಾರ ಕೊಡಿ. ನೂರು ದಿನದಲ್ಲಿ ಕಪ್ಪು ಹಣ ಹೊರ ತರುತ್ತೇವೆ. ಸೋನಿಯಾ ಗಾಂಧಿಯವರು ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ ಎಂದು ಜನರನ್ನು ಮರಳು ಮಾಡಿದರು. ಜನರು ಅದನ್ನ‌ ನಂಬಿ ಇವರಿಗೆ ಮತ ಹಾಕಿದರು. ಆದರೆ, ಈವರೆಗೂ ಅವರು ಕಪ್ಪು ಹಣ ತಂದಿಲ್ಲ. ಯಾಕೆಂದರೆ, ಕಪ್ಪು ಹಣ ಇರೋದೆ ಇವರ ಬಳಿ.‌ ಗುಜರಾತಿನ ವ್ಯಾಪಾರಸ್ಥರೆಲ್ಲ ಸೇರಿ ಸೃಷ್ಟಿ ಮಾಡಿದ್ದೇ ನರೇಂದ್ರ ಮೋದಿಯನ್ನು. ಕಾಂಗ್ರೆಸ್ ನವರು ಕಪ್ಪು ಹಣ ಮಾಡಿಲ್ಲ. ಅವರ ಬಳಿಯೂ ಇಲ್ಲ ಎಂದರು.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಮಾತನಾಡಿ, ಎಲ್ಲಾ ಜಿಲ್ಲೆಯಲ್ಲಿ ಮೂಲ ಸೌಕರ್ಯ ಇದೆ. ನಮ್ಮಲ್ಲಿ ಕೇಂದ್ರ ಸಚಿವರಿದ್ದರೂ ಏನೂ ಅಭಿವೃದ್ಧಿ ಆಗಿಲ್ಲ. 23 ವರ್ಷ ಸಂಸದರಾಗಿ ಮಾಡಿದ್ದು ಬೊಗಳೆ ಭಾಷಣವಷ್ಟೇ ಎಂದು ಅಸಮಾಧಾನ ಹೊರಹಾಕಿದರು.

ಪ್ರತಿಯೊಬ್ಬರೂ ಈ ಬಾರಿ ಯೋಚಿಸಿ ಮತದಾನ ಮಾಡಿ. ಜೆಡಿಎಸ್ ಚಿಹ್ನೆಯಾದ ತೆನೆ ಹೊತ್ತ ಮಹಿಳೆ ಚಿಹ್ನೆಗೆ ಮತ ನೀಡಿ ಪ್ರಚಂಡ ಬಹುಮತದಿಂದ ನನ್ನನ್ನು ಆರಿಸಿ ತನ್ನಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಜಿ.ಪಂ ಸದಸ್ಯರಾದ ಪ್ರದೀಪ ನಾಯಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ ಪಟಗಾರ, ಜೆಡಿಎಸ್ ತಾಲೂಕಾಧ್ಯಕ್ಷ  ಮಂಜುನಾಥ್ ಪಟಗಾರ, ಕಾಂಗ್ರೆಸ್ ತಾಲೂಕಾಧ್ಯಕ್ಷ ವಿ.ಎಲ್ ನಾಯ್ಕ, ಸೇವಾದಳದ ಜಿಲ್ಲಾಧ್ಯಕ್ಷ ಆರ್.ಎಚ್.ನಾಯ್ಕ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News