×
Ad

ಸೋಲಾರ್ ಪ್ರಕರಣದ ಆರೋಪಿ ಬಿಜು ತನ್ನ ಪತ್ನಿಯ ಕೊಲೆ ಪ್ರಕರಣದಲ್ಲಿ ಖುಲಾಸೆ

Update: 2019-04-12 18:03 IST

ಕೊಚ್ಚಿ, ಎ.12: ಕೇರಳದ ಹಿಂದಿನ   ಯುಡಿಎಫ್ ಸರಕಾರಕ್ಕೆ ಹಗರಣದ ಕೊಳೆ ಮೆತ್ತಿಕೊಂಡಿದ್ದ     ಸೋಲಾರ್ ವಿದ್ಯುತ್ ದೀಪ ಖರೀದಿ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ  ಬಿಜು ರಾಧಾಕೃಷ್ಣನನ್ನು ತನ್ನ ಮೊದಲ ಪತ್ನಿಯ  ಹತ್ಯಾ ಪ್ರಕರಣದಲ್ಲಿ  ಕೇರಳ ಹೈಕೋರ್ಟ್ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.

2014 ಜನವರಿಯಲ್ಲಿ ಪತ್ನಿ ರಶ್ಮೀ ಹತ್ಯಾ ಪ್ರಕರಣದಲ್ಲಿ ಬಿಜು ರಾಧಾಕೃಷ್ಣನ್ ಗೆ  ಜೀವಾವಧಿ ಸಜೆ ಮತ್ತು ಆತನ ತಾಯಿ ರಾಜಾಮ್ಮಾಲ್ ಗೆ ವರದಕ್ಷಿಣೆ  ಕಿರುಕುಳ ಆರೋಪದಲ್ಲಿ ಕೊಲ್ಲಂ ಜಿಲ್ಲಾ ಸತ್ರ ನ್ಯಾಯಾಲಯವು ಜೈಲು ಸಜೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಬಿಜು ರಾಧಾಕೃಷ್ಣನ್  ಮತ್ತು ತಾಯಿ ರಾಜಾಮ್ಮಾಲ್ ಹೈಕೋರ್ಟ್ ಮೊರೆ ಹೋಗಿದ್ದರು.

ಬಿಜು ರಾಧಾಕೃಷ್ಣನ್ ಮತ್ತು ರಾಜಾಮ್ಮಾಲ್ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ಪ್ರಾಶಿಕ್ಯೂಶನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅವರನ್ನು  ದೋಷಮುಕ್ತಗೊಳಿದೆ. ಬಿಜುಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಜೈಲು ಸಜೆ ಮತ್ತು 1 ಲಕ್ಷ ರೂ. ದಂಡ, ತಾಯಿ ರಾಜಾಮ್ಮಾಲ್ ಗೆ 3 ವರ್ಷ ಜೈಲು ಸಜೆ ಮತ್ತು 50 ಸಾವಿರ ದಂಡ ವಿಧಿಸಿತ್ತು.

ಬಿಜು ಮತ್ತು ರಶ್ಮೀ 2001ರಲ್ಲಿ ವಿವಾಹವಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ

2006, ಫೆಬ್ರವರಿ 5ರಂದು  ಬಿಜು ಪತ್ನಿ ರಶ್ಮೀ  ತನ್ನ ಮನೆಯಲ್ಲಿ ನಿಗೂಢವಾಗಿ  ಮೃತಪಟ್ಟಿದ್ದರು. ಸೋಲಾರ್ ಹಗರಣದ ಪ್ರಮುಖ  ಆರೋಪಿ ಸರಿತಾ  ಎಸ್ ನಾಯರ್ ನ್ನು ಮದುವೆಯಾಗುವ ಉದ್ದೇಶಕ್ಕಾಗಿ ಬಿಜು ತನ್ನ ಪತ್ನಿ ರಶ್ಮೀಗೆ ಮದ್ಯದಲ್ಲಿ ವಿಷ ಬೆರೆಸಿ ಬಲವಂತವಾಗಿ ಕುಡಿಸಿ ಕೊಲೆಗೈದಿರುವುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆ  ನಡೆಸಿದ್ದ ಕ್ರೈಂ ಬ್ರಾಂಚ್ ಪೊಲೀಸರು 2013 ಜೂನ್ ನಲ್ಲಿ ಬಿಜು ಮತ್ತು ಆತನ ತಾಯಿ ರಾಜಾಮ್ಮಾಲ್ ನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News