ಕಾಂಗ್ರೆಸ್ ಪ್ರಣಾಳಿಕೆ: ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು- ಜೆ.ಆರ್.ಲೋಬೊ
ಮಂಗಳೂರು, ಎ.12: ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ. ಆ ಮೂಲಕ ಮುಂದಿನ 5 ವರ್ಷಗಳಲ್ಲಿ ಕರ್ನಾಟಕದ ಆರ್ಥಿಕ ಹೆಬ್ಬಾಗಿಲಾಗಿ ದ.ಕ. ಜಿಲ್ಲೆಯು ರೂಪು ತಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವ ಮಂಗಳೂರು ಬಂದರು ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಮಹತ್ವ ನೀಡಲಾಗಿದೆ. ಮಂಗಳೂರು-ಗೋವಾ ಎಕ್ಸ್‌ಪ್ರೆಸ್ ಹೈವೇ, ದ.ಕ. ಮತ್ತು ಉ.ಕ. ಬೆಸೆದುಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ಅಭಿವೃದ್ಧಿ, ಮಂಗಳೂರು-ಬೆಂಗಳೂರು, ಮಂಗಳೂರು-ಮುಂಬೈ ರೈಲು ಹಳಿ ದ್ವಿಗುಣ, ಮಂಗಳೂರನ್ನು ಲಕ್ಷದ್ವೀಪದ ಆರ್ಥಿಕ ಅಭಿವೃದ್ಧಿಯ ಕೇಂದ್ರ ವಾಗಿಸುವುದು, ಮಂಗಳೂರಿನಲ್ಲಿ ಐಟಿ ಕೇಂದ್ರ ಸ್ಥಾಪನೆ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದರು.
ಖಾಸಗೀಕರಣವೇ ಅಭಿವೃದ್ಧಿಯೇ?
ಬಿಜೆಪಿಯ ತನ್ನ ಪ್ರಣಾಳಿಕೆಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದಿದೆ. ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವುದು ಅಭಿವೃದ್ಧಿಯೇ ? ಮೀನುಗಾರಿಕೆ ಅಭಿವೃದ್ಧಿಗೆ ಈ ಹಿಂದೆ ಅವರು ನೀಡಿದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಈಗ ಅದೇ ಭರವಸೆಯನ್ನು ಮತ್ತೆ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಆದರೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದಲ್ಲಿ ಏನಾದರು ಬದಲಾವಣೆ ಆಗಿದೆಯಾ ಎಂದು ಜೆ.ಆರ್.ಲೋಬೋ ಪ್ರಶ್ನಿಸಿದರು.
ಸಾರ್ವಜನಿಕ ಸಂಸ್ಥೆಗಳು ದುರ್ಬಲ
ಕಾಂಗ್ರೆಸ್ ಜನಸಾಮಾನ್ಯರ ಪರವಾಗಿ ಮತ್ತು ದೇಶಾಭಿವೃದ್ಧಿಯ ಚಿಂತನೆಯೊಂದಿಗೆ ನೀಡಿದ ಭರವಸೆಗಳನ್ನು ಮಾತ್ರ ಕಾರ್ಯರೂಪಕ್ಕೆ ತರುತ್ತದೆ. ಯುಪಿಎ ಸರಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಉತ್ತಮವಾಗಿತ್ತು. ಆದರೆ ಬಳಿಕದ ಐದು ವರ್ಷಗಳಲ್ಲಿ ಆರ್ಥಿಕ ದುರ್ಬಲತೆ, ನಿರುದ್ಯೋಗ ಹೆಚ್ಚಳ ಮತ್ತಿತರ ಸಮಸ್ಯೆ ದೇಶದಲ್ಲಿ ಉದ್ಭವಿಸಿದೆ. ಬಿಎಸ್ಸೆನ್ನೆಲ್ ಸಹಿತ ಸಾರ್ವಜನಿಕ ಸಂಸ್ಥೆಗಳು ಬಲಗೊಳ್ಳುವ ಬದಲು ದುರ್ಬಲಗೊಳ್ಳುತ್ತಿವೆ ಎಂದು ಜೆ.ಆರ್.ಲೋಬೊ ಆಪಾದಿಸಿದರು.
ಮಿಥುನ್‌ರನ್ನು ಗೆಲ್ಲಿಸಿ
ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಳೆದ 10 ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಸ್ವತಃ ಬಿಜೆಪಿಗರಿಂದಲೇ ಟೀಕೆಗೊಳಗಾದ ಅವರನ್ನು ಮತ್ತೆ ಸಂಸದರಾಗಿ ಆಯ್ಕೆ ಮಾಡುವ ಬದಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸಮರ್ಥ ಅಭ್ಯರ್ಥಿ ಮಿಥುನ್ ರೈಯವರನ್ನು ಆರಿಸಿ ಕಳುಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸುರೇಶ್ ಬಳ್ಳಾಲ್,ವಿಶ್ವಾಸ್‌ದಾಸ್, ಟಿ.ಕೆ.ಸುಧೀರ್, ಅಬ್ದುಲ್ ಸಲೀಂ, ಮರಿಯಮ್ಮ ಥೋಮಸ್, ಮೋಹನ್ ಶೆಟ್ಟಿ, ಸ್ಟ್ಯಾನಿ ಆಲ್ವಾರೀಸ್, ರಮಾನಂದ್ ಬೋಳಾರ್ ಉಪಸ್ಥಿತರಿದ್ದರು.