×
Ad

ಕಾಂಗ್ರೆಸ್-ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯ: ರೈತಸಂಘ

Update: 2019-04-12 18:54 IST

ಮಂಗಳೂರು, ಎ.12: ಕಾಂಗ್ರೆಸ್ ಹಾಗೂ ಬಿಜೆಪಿ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಪ್ರಮುಖ ಪಕ್ಷಗಳು ಬಂಡವಾಳಶಾಹಿಗಳ ಗುಲಾಮರಂತೆ ವರ್ತಿಸುತ್ತಿವೆ. ಹಾಗಾಗಿ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಅಗತ್ಯವಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ಪ್ರಾಂತ್ಯ ರೈತ ಸಂಘದ ಆಶ್ರಯದಲ್ಲಿ ‘ರೈತರ ಸಂಕಷ್ಟಗಳು-ರಾಜಕೀಯ ಪಕ್ಷಗಳ ನಿಲುವು’ ಕುರಿತು ನಗರದಲ್ಲಿ ಶುಕ್ರವಾರ ನಡೆದ ಸಂವಾದ ಹಾಗೂ ಮೋದಿ ಆಳ್ವಿಕೆಯಲ್ಲಿ ರೈತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಸಮಸ್ಯೆ, ಕೃಷಿ ಸಂಕಷ್ಟಗಳ ಕುರಿತು ಪ್ರಮುಖ ರಾಜಕೀಯ ಪಕ್ಷಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಜನಪರ ಚಳುವಳಿಯ ಮೂಲಕ ದೇಶ ಕಟ್ಟುವ ಕಾರ್ಯ ನಡೆಯಬೇಕಿದೆ. ದೇಶದ ಮಾನವ ಸಂಪತ್ತು ಕೂಡ ಬಂಡವಾಳಶಾಹಿಗಳ ಪ್ರಭಾವದಿಂದ ಗುಲಾಮಗಿರಿಯತ್ತ ಸಾಗುತ್ತಿದೆ. ಜನಪರ ಚಳುವಳಿ ಯಿಂದ ಮಾತ್ರ ಇದನ್ನು ಹತ್ತಕ್ಕಲು ಸಾಧ್ಯ ಎಂದು ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ದೇಶದಲ್ಲಿ ಸಾರ್ವಜನಿಕ ಕ್ಷೇತ್ರ ಕಣ್ಮರೆಯಾಗುತ್ತಿದೆ. ವಿಮಾನ ನಿಲ್ದಾಣ, ಬಂದರು ಖಾಸಗಿಯವರಿಗೆ ನೀಡಲಾಗುತ್ತಿದೆ. ಜನಸಾಮಾನ್ಯರ ಬದುಕು ದಿವಾಳಿಯಾಗುತ್ತಿದೆ. ಉದ್ಯೋಗ ನಾಶವಾಗುತ್ತಿದೆ ಎಂದ ಅವರು ಮಂದಿರ- ಮಸೀದಿಯ ರಾಜಕಾರಣ ನಮಗೆ ಬೇಕಾಗಿಲ್ಲ. ಮೋದಿ-ರಾಹುಲ್ ಕುರಿತು ವ್ಯಕ್ತಿಗತ ಚರ್ಚೆಯೂ ಬೇಕಾಗಿಲ್ಲ. ರೈತರ ಸಮಸ್ಯೆ, ಕೃಷಿ ಕ್ಷೇತ್ರ, ಉದ್ಯೋಗ, ನೀರಾವರಿ ಯೋಜನೆ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಆದರೆ ಮೋದಿ ಸರಕಾರ ಇದರ ಕುರಿತು ಚರ್ಚೆ ನಡೆಸುತ್ತಿಲ್ಲ. ಬದಲಾಗಿ ಕಾರ್ಪೊರೇಟ್ ಜಗತ್ತಿನ ಏಜೆಂಟ್ ತರಹ ಕೆಲಸ ಮಾಡುತ್ತಿವೆ ಎಂದು ಬಡಗಲಪುರ ನಾಗೇಂದ್ರ ಆರೋಪಿಸಿದರು.

ರೈತರ ಸಂಕಷ್ಟಗಳ ಪರಿಹಾರಕ್ಕೆ ಕೃಷಿಯನ್ನು ಬೆಳೆಸುವ ಕಲೆ ಇಷ್ಟರವರೆಗೆ ನಮ್ಮನ್ನಾಳುವ ಮಂದಿಗೆ ಸಾಧ್ಯವಾಗದಿರುವುದು ರೈತರ ಸಂಕಷ್ಟಕ್ಕೆ ಕಾರಣ ವಾಗಿದೆ. ದೇಶದ ಹಸಿರು ಕ್ರಾಂತಿ ಕೃಷಿಯ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಸರಕಾರ ಉತ್ಪಾದನೆ ಬಗ್ಗೆಯೇ ಉತ್ಸುಕವಾಗಿದೆಯೇ ಹೊರತು ಉತ್ಪಾದನೆಯ ತೊಂದರೆ ಬಗ್ಗೆ ಯೋಚನೆ ಮಾಡಿಲ್ಲ. ಬರ ಎದುರಿಸಲು ಸರಿಯಾದ ಯೋಜನೆಯನ್ನು ಇದುವರೆಗೆ ರೂಪಿಸಿಲ್ಲ. ರೋಗ ರುಜಿನಗಳು ಕೂಡ ಹೆಚ್ಚಾಗಿದೆ. ಇವೆಲ್ಲವೇ ರೈತರ ಆತ್ಮಹತ್ಯೆಗೆ ಕಾರಣ ಎಂದು ಬಡಗಲಪುರ ನಾಗೇಂದ್ರ ನುಡಿದರು.

ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಲೇಖಕ ಸುರೇಶ್ ಭಟ್ ಬಾಕ್ರಬೈಲ್ ‘ಮೋದಿ ಆಳ್ವಿಕೆಯಲ್ಲಿ ರೈತ’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ್ ಪುಣಚ, ಕರ್ನಾಟಕ ಪ್ರಾಂತ್ಯ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ರೈತ ಸಂಘದ ನಾಯಕರಾದ ಎಂ. ಕಾಮು, ಕೃಷ್ಣಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ವಿಮಾ ಕಂಪನಿಗಳಿಗೆ 6,500 ಕೋ.ರೂ.ಲಾಭ

ಯುಪಿಎ ಸರಕಾರ ಅರ್ಧದಲ್ಲಿ ನಿಲ್ಲಿಸಿದ ನೀರಾವರಿ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪೂರ್ಣಗೊಳಿಸಿಲ್ಲ. ಸಲ್ ಭೀಮಾ ಯೋಜನೆಯಡಿ ರೈತರಿಗೆ ಕೇವಲ 1,550 ಕೋ.ರೂ. ಮಾತ್ರ ಪರಿಹಾರ ನೀಡಲಾಗಿದೆ. ಆದರೆ ವಿಮಾ ಕಂಪನಿಗಳಿಗೆ 6,500 ಕೋಟಿ ರೂ. ಲಾಭ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಬಾಮರಸ ಮಾಲೀ ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News